ಅಧ್ಯಕ್ಷ ಹುದ್ದೆಗೆ ರತನ್ `ಟಾಟಾ'

ಮುಂಬೈ (ಪಿಟಿಐ): ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ವಹಿವಾಟು ಹೊಂದಿರುವ, 100 ಶತಕೋಟಿ ಡಾಲರ್ (ರೂ4,75,721 ಕೋಟಿ) ಮೌಲ್ಯದ ಟಾಟಾ ಸಮೂಹದ ಅಧ್ಯಕ್ಷ ಹುದ್ದೆಯಿಂದ ರತನ್ ಟಾಟಾ ಶುಕ್ರವಾರ ನಿವೃತ್ತರಾಗಿದ್ದಾರೆ.

ಜೆಆರ್‌ಡಿ ಟಾಟಾ ಅವರ ಉತ್ತರಾಧಿಕಾರಿಯಾಗಿ, ಟಾಟಾ ಸಮೂಹದ 5ನೇ ಅಧ್ಯಕ್ಷರಾಗಿ ರತನ್ ಟಾಟಾ 1991ರಲ್ಲಿ ನೇಮಕಗೊಂಡಿದ್ದರು. 21 ವರ್ಷ ಅಧ್ಯಕ್ಷರಾಗಿ ಒಟ್ಟು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, ತಮಗೆ 75 ವರ್ಷ ತುಂಬಿದ ದಿನವೇ (ಡಿ. 28) ನಿವೃತ್ತರಾಗಿರುವುದು ಮತ್ತೊಂದು ವಿಶೇಷ. 

ಟಾಟಾ ಸಮೂಹದ ಪ್ರವರ್ತಕ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಗರಿಷ್ಠ ಪಾಲು ಹೊಂದಿರುವ ಷರ್ಪೊಜಿ ಪಲ್ಲೊಂಜಿ ಕುಟುಂಬದ 44 ವರ್ಷದ ಸೈರಸ್ ಪಿ. ಮಿಸ್ತ್ರಿ ಟಾಟಾ ಸಮೂಹದ ಹೊಸ ಅಧ್ಯಕ್ಷರಾಗಿ ಡಿ.29ರಂದು ಅಧಿಕಾರ ಸ್ವೀಕರಿಸಲಿದ್ದಾರೆ.  ಟಾಟಾ ಸನ್ಸ್‌ನ ನಿವೃತ್ತ ಅಧ್ಯಕ್ಷರಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ.

1991ರಲ್ಲಿ ಕೇವಲರೂ10 ಸಾವಿರ ಕೋಟಿ ವಹಿವಾಟು ಹೊಂದಿದ್ದ ಕಂಪೆನಿಯನ್ನು 2011- 12ರ ವೇಳೆಗೆ 100.9 ಶತಕೋಟಿ ಡಾಲರ್           ಮೌಲ್ಯದ ಜಾಗತಿಕ ಕಾರ್ಪೊರೇಟ್ ಬ್ರಾಂಡ್ ಆಗಿ ರೂಪಿಸಿದ್ದು ರತನ್ ಟಾಟಾ ಅವರ ಹೆಗ್ಗಳಿಕೆ. 2000ನೇ ಸಾಲಿನಲ್ಲಿ `ಟೆಟ್‌ಲಿ' ಸ್ವಾಧೀನ (450 ದಶಲಕ್ಷ ಡಾಲರ್) 2007ರಲ್ಲಿ ಉಕ್ಕು ತಯಾರಿಕಾ ಕಂಪೆನಿ `ಕೋರಸ್' ಸ್ವಾಧೀನ (6.2 ಶತಕೋಟಿ ಡಾಲರ್) 2008ರಲ್ಲಿ  ಜಾಗ್ವಾರ್ ಅಂಡ್ ಲ್ಯಾಂಡ್ ರೋವರ್ ಸ್ವಾಧೀನ (2.3 ಶತಕೋಟಿ ಡಾಲರ್) ಇದು ರತನ್ ಟಾಟಾ ಅವಧಿಯಲ್ಲಿ ನಡೆದ ಪ್ರಮುಖ ಸ್ವಾಧೀನ ಪ್ರಕ್ರಿಯೆಗಳು.

`ಟಾಟಾ ಯಶಸ್ವಿ ನಾಯಕ'
ನವದೆಹಲಿ (ಪಿಟಿಐ): `ರತನ್ ಟಾಟಾ ಭಾರತದ  ಕಾರ್ಪೊರೇಟ್ ವಲಯದ ನೈಜ ಮುಖಂಡ. ಟಾಟಾ ಸಮೂಹವನ್ನು ಅವರು ವಿಶ್ವದರ್ಜೆಗೆ ಏರಿಸಿದರು. ಯಾವುದೇ ರಾಜಿಗೆ ಒಳಗಾಗದೆ  ಪ್ರಾಮಾಣಿಕವಾಗಿಯೇ ಉದ್ಯಮ ವಿಸ್ತರಿಸಲು ಸಾಧ್ಯ ಎನ್ನುವುದನ್ನು ಅವರು ಸಾಧಿಸಿ ತೋರಿಸಿದರು' ಎಂದು ಉದ್ಯಮ ವಲಯ ಟಾಟಾ ಅವರನ್ನು  ಬಣ್ಣಿಸಿದೆ.

`ಟಿಸಿಎಸ್' ಸೇರಿದಂತೆ ಒಟ್ಟಾರೆ ಟಾಟಾ ಸಮೂಹದ ವಹಿವಾಟು ವಿಸ್ತರಣೆಯನ್ನು ರತನ್ ಟಾಟಾ  ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು. ಅವರೊಬ್ಬ ಪ್ರತಿಭಾವಂತ ಕಾರ್ಪೊರೇಟ್ ಮುಖಂಡ' ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಆದಿ ಗೊದ್ರೇಜ್ ಅಭಿಪ್ರಾಯಪಟ್ಟಿದ್ದಾರೆ.

`ರತನ್ ಟಾಟಾ ಭಾರತದ ಉದ್ಯಮ ರಂಗದ ಮಾದರಿ ನಾಯಕ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಾರ್ಪೊರೇಟ್ ದಿಗ್ಗಜ. ಪ್ರಾಮಾಣಿಕತೆ, ಬದ್ಧತೆಗೆ ಅವರು ಮಾದರಿ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ        ಸಂಘದ (ಅಸೋಚಾಂ) ಅಧ್ಯಕ್ಷ ರಾಜ್‌ಕುಮಾರ್ ದೂತ್ ಹೇಳಿದ್ದಾರೆ.

`ವಿದಾಯ ಪತ್ರ'  
`ಭಾರತದ ಆರ್ಥಿಕತೆ ಸದ್ಯ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿ ಇನ್ನೂ ಒಂದು ವರ್ಷ ಮುಂದುವರೆಯಬಹುದು. ಒಮ್ಮೆ ಈ ಹಂತ ದಾಟಿದರೆ ಮತ್ತೆ ಆರ್ಥಿಕ ವಾತಾವರಣ ಸ್ಥಿರತೆ ಕಾಣಲಿದೆ. ಇಂತಹ ಕಷ್ಟದ ಸಮಯದಲ್ಲಿ ಯಶಸ್ಸು ಸಾಧಿಸಬೇಕಾದರೆ ಬದ್ಧತೆ ಮತ್ತು ಸಮರ್ಪಣಾ ಮನೋಭಾವ ಅಗತ್ಯ' ಎಂದು ರತನ್ ಟಾಟಾ ತಮ್ಮ ಸಹೋದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದಲ್ಲಿ ಹೇಳಿದ್ದಾರೆ.    

ಮಿಸ್ತ್ರಿ ಹೊಸ ಅಧ್ಯಕ್ಷ
1968ರ ಜುಲೈ 4ರಂದು ಜನಿಸಿದ ಸೈರಸ್ ಪಿ. ಮಿಸ್ತ್ರಿ, ಲಂಡನ್‌ನ ಇಂಪಿರಿಯಲ್ ಕಾಲೇಜ್ ಆಫ್ ಸೈನ್ಸ್‌ನಿಂದ  ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆ ಮಾಡಲು ನೇಮಕಗೊಂಡಿದ್ದ ಐವರು ತಜ್ಞರ ಸಮಿತಿ ಮಿಸ್ತ್ರಿ ಅವರನ್ನು ಕಳೆದ ವರ್ಷ ನೇಮಕ ಮಾಡಿತ್ತು.