ಬಿಬಿಎಂಪಿ: 35 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿಗಾಗಿ ಟೆಂಡರ್‌

ಒಣತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟಿಪ್ಪರ್‌

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ 35 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿಗಾಗಿ ಕರೆದಿರುವ ಟೆಂಡರ್‌ನಲ್ಲಿ ಒಣತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟಿಪ್ಪರ್‌ಗಳ ವ್ಯವಸ್ಥೆ ಮಾಡುವುದೂ ಸೇರಿದಂತೆ ಹಲವು ಹೊಸ ಷರತ್ತುಗಳನ್ನು ವಿಧಿಸಲಾಗಿದೆ.

ಸೋಮವಾರ ತಮ್ಮನ್ನು ಭೇಟಿಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ಈ ಮಾಹಿತಿ ನೀಡಿದರು. ‘ಪ್ರತಿ ಎರಡು ದಿನಕ್ಕೊಮ್ಮೆ ಒಣಕಸ ಸಂಗ್ರಹ ಮಾಡಬೇಕು. ಅದಕ್ಕೆ ಪ್ರತ್ಯೇಕ ಟಿಪ್ಪರ್‌ ವ್ಯವಸ್ಥೆ ಮಾಡಬೇಕು ಎಂಬ ಷರತ್ತು ಹಾಕಲಾಗಿದೆ’ ಎಂದರು.

‘ಈ ವಾರ್ಡ್‌ಗಳ ಕಸ ವಿಲೇವಾರಿ ವ್ಯವಸ್ಥೆಯನ್ನು ಗುತ್ತಿಗೆ ನೀಡಿದ ಮೇಲೆ ಕಸ ವಿಂಗಡಣೆ ಕಡ್ಡಾಯ ಮಾಡಲಾಗುತ್ತದೆ. ಪ್ರತಿ 750 ಮನೆಗಳಿಗೆ ಒಂದರಂತೆ ಟಿಪ್ಪರ್‌ ಇರಬೇಕು ಎಂಬ ನಿಯಮವನ್ನೂ ಹಾಕಲಾಗಿದೆ’ ಎಂದು ಹೇಳಿದರು.

‘ಪೌರಕಾರ್ಮಿಕರ ರಜಾ ದಿನಗಳನ್ನೂ ಗಣನೆಗೆ ತೆಗೆದುಕೊಂಡ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರು ಕಸಗುಡಿಸುವ ರಸ್ತೆ ಉದ್ದದ ದೂರವನ್ನೂ ಕಡಿತಗೊಳಿಸಲಾಗಿದೆ’ ಎಂದು ವಿವರಿಸಿದರು.

‘ಒಬ್ಬ ಗುತ್ತಿಗೆದಾರ ಇಲ್ಲವೆ ಒಂದು ಗುತ್ತಿಗೆ ಸಂಸ್ಥೆ ಗರಿಷ್ಠ ಐದು ಪ್ಯಾಕೇಜ್‌ ಪಡೆಯಲಷ್ಟೇ ಹೊಸ ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಟ್ಟು 113 ವಾರ್ಡ್‌ಗಳ ಕಸ ವಿಲೇವಾರಿ ಗುತ್ತಿಗೆ ಅವಧಿ ಮುಗಿಯುತ್ತಾ ಬಂದಿದ್ದು, ಮೊದಲ ಹಂತದಲ್ಲಿ 35 ವಾರ್ಡ್‌ಗಳಿಗೆ ಟೆಂಡರ್‌ ಕರೆಯಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ಉದ್ಯಾನಗಳ ವ್ಯವಸ್ಥೆಯನ್ನೂ ಪರಿಶೀಲಿಸಿ, ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಲೆಗಸಿ ಪ್ರಕರಣ: ‘ಕನ್ನಿಂಗ್‌ಹ್ಯಾಂ ರಸ್ತೆಯ ಕ್ವೀನ್ಸ್‌ ಕಾರ್ನರ್‌ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ಅಂತಿಮ ವರದಿ ನೀಡಲು ಇನ್ನೂ ಒಂದು ವಾರ ಕಾಲಾವಕಾಶ ಕೇಳಿದ್ದಾರೆ’ ಎಂದು ಹೇಳಿದರು. ‘ಕ್ವೀನ್ಸ್‌ ಕಾರ್ನರ್‌ ಕಟ್ಟಡದ ಸುರಕ್ಷಾ ಕಾರ್ಯ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಅಲ್ಲಿನ ಫ್ಲ್ಯಾಟ್‌ ನಿವಾಸಿಗಳು ಕಟ್ಟಡಕ್ಕೆ ವಾಪಸ್ ಆಗಲಿದ್ದಾರೆ. ಆದಾಯ ತೆರಿಗೆ ವಸತಿಗೃಹ ಕಟ್ಟಡದ ಸುರಕ್ಷಾ ಕಾರ್ಯ ಮುಗಿಯಲು ಇನ್ನೂ ಒಂದು ವಾರ ಬೇಕು’ ಎಂದು ಸ್ಪಷ್ಟಪಡಿಸಿದರು.

‘ಎಲ್ಲ ವೆಚ್ಚವನ್ನೂ ಲೆಗಸಿ ಸಂಸ್ಥೆಯೇ ಪಾವತಿಸಿದ್ದು, ತಪ್ಪಿಗೆ ದಂಡ ತೆತ್ತಿದೆ. ಅಂತಿಮ ವರದಿ ಕೈಸೇರಿದ ಬಳಿಕ ಕೈಗೊಳ್ಳಬೇಕಾದ ಕಾನೂನು ಕ್ರಮದ ಕುರಿತು ನಿರ್ಧರಿಸಲಾಗುವುದು’ ಎಂದರು.

‘ಕಟ್ಟಡ ನಕ್ಷೆ ಮಂಜೂರಾತಿ ನಿಯಮದಲ್ಲಿ ಮಾರ್ಪಾಡು ಮಾಡುವುದು ಅಗತ್ಯವೆ ಎನ್ನುವುದನ್ನೂ ಚಿಂತಿಸಲಾಗುವುದು’ ಎಂದು ಹೇಳಿದರು.

ಗುತ್ತಿಗೆದಾರರಿಗೆ ₹ 25 ಲಕ್ಷ ದಂಡ
‘ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕಾದ ರಸ್ತೆಗಳಲ್ಲಿ ಗುಂಡಿಗಳು ಪತ್ತೆಯಾಗಿದ್ದು, ₹ 25 ಲಕ್ಷ ದಂಡ ವಿಧಿಸಲಾಗಿದೆ. ಈ ಮೊತ್ತವನ್ನು ಗುತ್ತಿಗೆದಾರರ ಭದ್ರತಾ ಠೇವಣಿಯಿಂದ ಕಡಿತ ಮಾಡಲಾಗುವುದು’ ಎಂದು ಆಡಳಿತಾಧಿಕಾರಿ ಅವರು ತಿಳಿಸಿದರು.

‘ದಂಡ ನೀಡಿದ ಮೇಲೂ ಗುತ್ತಿಗೆದಾರರೇ ಈ ಗುಂಡಿಗಳನ್ನು ಮುಚ್ಚಬೇಕು’ ಎಂದು ಅವರು ಹೇಳಿದರು.

ಅಂಕಿಅಂಶ
* 750 ಮನೆಗಳಿಗೆ ಒಂದರಂತೆ ಟಿಪ್ಪರ್‌
* 35 ಮೊದಲ ಹಂತದಲ್ಲಿ ಟೆಂಡರ್‌ ಕರೆದಿರುವ ವಾರ್ಡ್‌ಗಳ ಸಂಖ್ಯೆ
* ₹ 25 ಲಕ್ಷ ಗುತ್ತಿಗೆದಾರರಿಗೆ ವಿಧಿಸಿದ ದಂಡ