ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ : ಆಲಿಬಾಬಾ ಗುಹೆಯ ರಹಸ್ಯ ಮತ್ತು ಬುದ್ಧನ ಬೆಳಕು (4)

ಯಾರು ಮುಳುಗಲೆಂದು ಕೃಷಿ ಹೊಂಡ?

ಇವತ್ತು ಎಲ್ಲೆಲ್ಲೂ ಕೃಷಿ ಹೊಂಡಗಳದ್ದೇ ಮಾತು. ಮೂಟೆಗಟ್ಟಲೆ ರಾಸಾಯನಿಕ ಗೊಬ್ಬರ ಹಾಕಿ, ಟನ್ನುಗಟ್ಟಲೆ ಕೀಟನಾಶಕ ಬಳಸಿ ಕೃಷಿ ಮಾಡಿದರೆ, ಯಾವ ಕೃಷಿ ಹೊಂಡವೂ ನಿಮ್ಮನ್ನು ಉದ್ಧಾರ ಮಾಡುವುದಿಲ್ಲ. ನಮಗಿಂದು ಬೇಕಾಗಿರುವುದು ವಿಷಮುಕ್ತ ಮಣ್ಣು, ವಿಷಮುಕ್ತ ಆಹಾರ, ವಿಷಮುಕ್ತ ಪರಿಸರವೇ ಹೊರತು ರಾಸಾಯನಿಕ ವಿಷಗಳನ್ನು ಚೆಲ್ಲಿ ಅನಗತ್ಯ ಶ್ರಮ ಬೆರೆಸಿ ಕೃಷಿಹೊಂಡದ ಕೃಷಿ ಮಾಡುವುದಿಲ್ಲ.

ಋತುಮಾನಗಳಿಗನುಗುಣವಾಗಿ ಮಳೆ ನಕ್ಷತ್ರಗಳಲ್ಲಿ ಏರುಪೇರಾಗುವುದು ಸ್ವಾಭಾವಿಕ. ಹತ್ತು ವರ್ಷಕ್ಕೆ, ಇಪ್ಪತ್ತು ವರ್ಷಕ್ಕೆ-ಒಮ್ಮೊಮ್ಮೆ ತಲೆದೋರುವ ಬರಗಾಲಕ್ಕೆ ನಮ್ಮ ಇಡೀ ಜೀವನವನ್ನೇ ಬರಗಾಲದ ವಿರುದ್ಧ ತೇಯಬೇಕೇಕೆ?

ನಿಸರ್ಗ ವಿಜ್ಞಾನ ಅರಿಯದವರು ನಮ್ಮ ಅಮಾಯಕ ರೈತರನ್ನು ವ್ಯರ್ಥ ಖರ್ಚುಗಳ ಕೃಷಿಯಲ್ಲಿ ಮುಳುಗಿಸುತ್ತಾರೆ.

ಮತ್ತೆ ಮಲ್ಚಿಂಗ್ ವಿಷಯಕ್ಕೆ ಬರೋಣ. ನಿಸರ್ಗ ಕೃಷಿಯಲ್ಲಿ ಹೊದಿಕೆ ಮತ್ತು ಆರ್ದ್ರತೆ ಒಂದರೊಳಗೊಂದು ಬೆಸೆದುಕೊಂಡಿರುತ್ತವೆ. ಮಳೆ ಆಶ್ರಿತ ಭೂಮಿಗಳಲ್ಲಿ ಒಳಮಣ್ಣಿನ ತೇವ ಆರದಂತಿರಲು ಮತ್ತು ಬೆಳೆಯ ಆರಂಭದಲ್ಲಿ ಕಳೆ ನಿಯಂತ್ರಿಸಲು ೧/೨ ಇಂಚಿನಿಂದ ೧ ಇಂಚಿನ ಆಳದವರೆಗೆ ಕುಂಟೆ ಹೊಡೆಯಿರಿ. ಯಾವುದೇ ಬೆಳೆಯ ಸಂದರ್ಭದಲ್ಲಿ ಎರಡು ಬಾರಿ ಕುಂಟೆ ಹೊಡೆದರೆ ಸಾಕು. ಕುಂಟೆಯ ಆಕೃತಿ ಚಿತ್ರದಲ್ಲಿ ತೋರಿಸಿದಂತೆ ಇರಲಿ. ಈ ಬಗೆಯ ಕುಂಟೆಯಲ್ಲಿ ಕುಂಟೆ ಹೊಡೆದರೆ ಮೇಲ್ಮಣ್ಣು ಪಲ್ಟಾಯಿಸುವುದಿಲ್ಲ. ಕಳೆ ಗಿಡಗಳ ಬೇರು ಹೆಚ್ಚು ಆಳಕ್ಕೆ ಹೋಗಿರುವುದಿಲ್ಲವಾದ್ದರಿಂದ ಆರಂಭಿಕ ಹಂತದ ಕಳೆಗಳು ನಾಶವಾಗುತ್ತವೆ. ಈ ಬಗೆಯಲ್ಲಿ ಕುಂಟೆ ಹೊಡೆಯುವ ಸ್ವರೂಪವನ್ನೆ ಮಣ್ಣಿನ ಹೊದಿಕೆ ಅಂತ ಕರೆಯುವುದು.

ಕಾಷ್ಟ ಅಚ್ಛಾದನ

ಭೂಮಿಯ ಆರ್ದ್ರತೆ ಆರದಿರಲು ಮತ್ತು ಮಣ್ಣಿನಲ್ಲಿ ಹ್ಯೂಮಸ್ ಸೃಷ್ಟಿಯಾಗಲು ಈ ಬಗೆಯ ಹೊದಿಕೆ ಅತ್ಯಗತ್ಯ. ಮಣ್ಣಿನಲ್ಲಿ ಅನೇಕಾನೇಕ ಸೂಕ್ಷ್ಮಜೀವಾಣುಗಳು, ಎರೆಹುಳುಗಳು ಸೃಷ್ಟಿಯಾಗುತ್ತವೆ ಮತ್ತು ತಮ್ಮ ಜೀವಿತಾವಧಿ ತೀರಿದ ಬಳಿಕ ಮರಳಿ ಮಣ್ಣು ಸೇರುತ್ತವೆ. ನಾವು ಫಸಲು ಪಡೆದ ಬಳಿಕ ಉಳಿದ ಕೃಷಿ ತ್ಯಾಜ್ಯಗಳನ್ನು ಮರಳಿ ಮಣ್ಣಿಗೆ ಹೊದಿಕೆಯಾಗಿ ರೂಪಾಂತರಿಸಬೇಕು. ಕಬ್ಬಿನ ಸೋಗಾಗಿರಲಿ, ಭತ್ತದ ಹೊಟ್ಟಾಗಲಿ ಸುಡಬಾರದು. ಬಿದ್ದ ತೆಂಗು, ಬಾಳೆ, ಅಡಿಕೆ ಗರಿಗಳನ್ನು ಒಂದೆಡೆ ಒಟ್ಟಾಗಿ ರಾಶಿ ಹಾಕುವ ಬದಲು ಅಲ್ಲಲ್ಲೇ ಹೊದಿಕೆ ಮಾಡಿ. ಬೇರುಸಹಿತ ಕಿತ್ತ ಕಳೆಗಿಡಗಳನ್ನು ಅಲ್ಲಲ್ಲೆ ಕೊಳೆಯಲು ಬಿಡಿ. ಶರದೃತುವಿನಲ್ಲಿ ಗಿಡಮರಗಳ ಎಲೆ ಉದುರುವುದು ಮಣ್ಣಿನ ತಾಪಮಾನ ಕಾಪಾಡಲು ಮತ್ತು ಜೀವಾಣುಗಳನ್ನು ಸಂರಕ್ಷಿಸಲು. ಬಿದ್ದ ಎಲೆ, ಕಸ, ಕಡ್ಡಿಗಳೆಲ್ಲ ಭೂತಾಯಿಗೆ ವಸ್ತ್ರವಿದ್ದಂತೆ. ಆ ವಸ್ತ್ರದ ಸೆರಗಲ್ಲಿ ಅಸಂಖ್ಯಾತ ಜೀವಿಗಳಿಗೆ ಆಸರೆ ನೀಡಿದ್ದಾಳೆ. ನಾವು ಅವುಗಳನ್ನೆಲ್ಲ ಉರಿಸಿ ಬೂದಿ ಮಾಡಿದರೆ ಭೂ ತಾಯಿಯನ್ನು ಬೆತ್ತಲುಗೊಳಿಸಿದಂತೆ.

ಈ ಹೊದಿಕೆಯಿಂದಾಗಿ ಭೂಮಿಯಲ್ಲಿ ಆರ್ದ್ರತೆ ಉಳಿಯುತ್ತದೆ. ಹ್ಯೂಮಸ್ ಅಭಿವೃದ್ಧಿಯಾಗುತ್ತದೆ. ಈ ಹ್ಯೂಮಸ್ ವಾತಾವರಣದಲ್ಲಿರುವ ತೇವಾಂಶವನ್ನು ಹೀರಿ ಅಗತ್ಯಬಿದ್ದಾಗ ಗಿಡಗಳಿಗೆ ಪೂರೈಸುತ್ತದೆ. ಸಾಲದ್ದಕ್ಕೆ ಕೇಶಾಕರ್ಷಣ ಬಲದಿಂದ ಊರ್ಧ್ವಗಾಮಿಯಾಗಿ ಬರುವ ಖನಿಜ-ಲವಣಾಂಶಗಳನ್ನು ಹಿಡಿದಿಡುತ್ತದೆ. ಇಷ್ಟೇ ಅಲ್ಲದೆ ಮಣ್ಣಿನ ಮೇಲ್ಭಾಗದ ಒಣ ಹೊದಿಕೆ ಮುಂಜಾವಿನ ಇಬ್ಬನಿ, ವಾತಾವರಣದ ಆರ್ದ್ರತೆಗಳೆಲ್ಲವನ್ನೂ ಹೀರಿಕೊಳ್ಳುತ್ತದೆ. ಈ ಪರಿಸ್ಥಿತಿಗೆ ವಿರುದ್ಧವಾಗಿ ಮಣ್ಣಿನಲ್ಲಿ ಅಧಿಕ ತೇವಾಂಶ ಇದ್ದರೆ ಅದನ್ನು ಹೀರಿ ವಾತಾವರಣಕ್ಕೆ ಬಿಡುಗಡೆ ಮಾಡಿ ದ್ವಿಮುಖಿ ಸಂಚಾರಿ ಭಾವವನ್ನು ಪ್ರಕಟಪಡಿಸುತ್ತದೆ. ಜೊತೆಗೆ ಈ ಹೊದಿಕೆಯಲ್ಲಿ ಫಾಸ್ಪೇಟ್, ಪೊಟ್ಯಾಷ್, ಜಿಂಕ್, ಸತು, ಮಾಲಿಬ್ಡಿನಂ ಇತ್ಯಾದಿ ಪೋಷಕಾಂಶಗಳಿರುತ್ತವೆ. ಮತ್ತೆ ಅವು ಬೆಳೆಯುವ ಬೆಳೆಗೆ ಲಭ್ಯವಾಗುತ್ತವೆ.

ಈ ಒಣ ಹೊದಿಕೆಯ ಜೊತೆಗೆ ಜೈವಿಕ ಹೊದಿಕೆಯೂ ಇದ್ದರೆ ಅದರ ಸೊಗಸು ಹೇಳತೀರದು. ಒಣ ಹೊದಿಕೆಯಂತೆಯೇ ಜೈವಿಕ ಹೊದಿಕೆಯೂ ಕಳೆಗಳನ್ನು ನಿಯಂತ್ರಿಸುತ್ತದೆ. ನಾವು ಜೈವಿಕ ಹೊದಿಕೆಯಾಗಿ ಉದ್ದು, ಅಲಸಂದೆ, ಹೆಸರು ಇತ್ಯಾದಿ ದ್ವಿದಳ ಧಾನ್ಯದ ಗಿಡಗಳನ್ನೂ; ಹಾಗಲ, ಕುಂಬಳ, ಹೀರೆ, ಪಡುವಲ, ಸೌತೆ, ಕಲ್ಲಂಗಡಿ, ಕರಬೂಜ ಇತ್ಯಾದಿ ಹಬ್ಬುವ ಬೆಳೆಗಳನ್ನೂ ಆಯೋಜಿಸಬೇಕು. ಇದರಿಂದ ಕಳೆಗಳು ನಿಯಂತ್ರಣಕ್ಕೆ ಬರುತ್ತವೆ, ಜೈವಿಕ ವೈವಿಧ್ಯ ಹೆಚ್ಚಾಗಿ ಕೀಟಗಳ ತೊಂದರೆಯೂ ನಿವಾರಣೆಯಾಗುತ್ತದೆ. ಜೊತೆಗೆ ಹೆಚ್ಚುವರಿ ಫಸಲಿನಿಂದ ಆದಾಯವೂ ಬರುತ್ತದೆ. ಮತ್ತು ಭೂಮಿಯ ಮೇಲಿನ ಹೊದಿಕೆಯೂ ಹೆಚ್ಚಾಗುತ್ತದೆ. ಇದರಿಂದಾಗಿ ತ್ವರಿತಗತಿಯಲ್ಲಿ ಮೇಲ್ಮಣ್ಣೂ ವೃದ್ಧಿಯಾಗುತ್ತದೆ. ಹ್ಯೂಮಸ್ ಸೃಷ್ಟಿಯಾಗಲು ಸಾವಯವ ಕಾರ್ಬನ್ ಜೊತೆಗೆ ಸಾರಜನಕವೂ ಇರಬೇಕು. ಭೂಮಿಯಲ್ಲಿ ಶೇಕಡ ೫೬ರಷ್ಟು ಸಾವಯವ ಇಂಗಾಲ, ಶೇಕಡ ೬ರಷ್ಟು ಸಾರಜನಕ ಇದ್ದಾಗಲೆ ಪರಿಪೂರ್ಣ ಮತ್ತು ಸಂತೃಪ್ತ ಮಟ್ಟದ ಹ್ಯೂಮಸ್ ಸೃಷ್ಟಿ ಸಾಧ್ಯ. ಭೂಮಿಯ ಮೇಲ್ಪದರದಲ್ಲಿ ಹೊದಿಕೆ, ಕೆಳಗಿನ ೪.೫ ಇಂಚಿನಲ್ಲೆ ಹ್ಯೂಮಸ್ ಇರುವಂಥದ್ದೇ ನಿಸರ್ಗ ಕೃಷಿ. ಇಂಥ ಆವರಣದಲ್ಲಿ ವರ್ಷದ ೩೬೫ ದಿನವೂ ಮೈಕ್ರೋ ಕ್ಲೈಮೇಟ್ ತಾಂಡವವಾಡುತ್ತದೆ.

ಪಾರ್ಥೇನಿಯಂ ಕುರಿತು ನೀವ್ಯಾರೂ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ. ಪಾರ್ಥೇನಿಯಂ ಅತ್ಯುತ್ತಮ ಮಲ್ಚಿಂಗ್ ಪರಿಕರ, ಮುಖ್ಯ ಬೆಳೆಗೆ ಪೈಪೋಟಿ ನೀಡುವ ಹಂತದಲ್ಲಿ ಮತ್ತು ಹೂ ಬಿಡುವ ಮುಂಚೆ ಅದನ್ನು ಬೇರುಸಹಿತ ಕಿತ್ತು ಹೊದಿಕೆಯನ್ನಾಗಿಸಿ, ಲಂಟಾನ ಮತ್ತು ಗಂಜಳದೊಂದಿಗೆ ಕುದಿಸಿ- ಪಾರ್ಥೇನಿಯಂ ಅನ್ನು ಕೀಟನಾಶಕವಾಗಿಯೂ ಬಳಸಬಹುದು. ಈ ಪಾರ್ಥೇನಿಯಂ ಕೆಲವರ ಪಾಲಿಗೆ ಅಲರ್ಜಿಕಾರಕ, ಮಾರಣಾಂತಿಕ ವಿಪತ್ತುಗಳಿಗೆ ಕಾರಣವಾಗಿದೆ. ನಮ್ಮ ಸರಕಾರದವರು ಪಾರ್ಥೇನಿಯಂ ನಾಶಕ್ಕಾಗಿ ಜೈಕೋಗ್ರಾಮ ಕೀಟಗಳನ್ನು ಅಲ್ಲಲ್ಲಿ ಬಿಟ್ಟಿದ್ದಾರೆ. ಇವು ಪಾರ್ಥೇನಿಯಂ ಕಳೆಗಳನ್ನು ಹಾಗೆಯೆ ಬಿಟ್ಟು ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು ಜಾತಿಯ ಗಿಡಗಳಿಗೆ ಅಮರಿಕೊಂಡಿವೆ. ನಮ್ಮ ಮುಳ್ಳುಕೀರೆ, ಚೆನ್ನಂಗಿ ಅಥವಾ ಚಗಚೆ CASIA GRANDIFLORA, CASIA UTILATA ಸಸ್ಯಗಳು ಪಾರ್ಥೇನಿಯಂ ಸಸ್ಯಗಳನ್ನು ಸಮರ್ಥ ರೀತಿಯಲ್ಲಿ ಹತ್ತಿಕ್ಕುತ್ತವೆ ಮತ್ತು ನಿರ್ಮೂಲನೆಯನ್ನೂ ಮಾಡುತ್ತವೆ. ಸಹಜ ಕೃಷಿಯ ಕೆ.ಎಂ.ಕೈಲಾಸಮೂರ್ತಿ ಪಾರ್ಥೇನಿಯಂ ನಿರ್ಮೂಲನಕ್ಕೆ ಅಮರಿಂತಾಸ್ ಮತ್ತು ಪುವೇರಿಯಾ ಗಿಡಗಳನ್ನು ಬೆಳೆಸಿದ್ದಾರೆ. ಈ ಅಮರಿಂತಾಸ್ ಮತ್ತು ಪುವೇರಿಯಾ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುತ್ತವೆ. ಹಾಗೆಯೇ ಚಗಚೆ ಗಿಡ.

ಮಲ್ಚಿಂಗ್‌ಗಾಗಿ ಎಕ್ಕ ಮತ್ತು ಎಕ್ಕದ ಜಾತಿಯ ಗಿಡಗಳನ್ನು ಬೆಳೆಸಬಾರದು. ಅವುಗಳಲ್ಲಿ ಕೀಟನಾಶಕ ಗುಣಗಳಿರುವುದರಿಂದಾಗಿ ಜೀವಾಣುಗಳು ಸಾಯುತ್ತವೆ. ಈ ಬಾರಿ ನಿಸರ್ಗ ಕೃಷಿ ಶುರುಮಾಡಿದ್ದೀರಿ, ಮಳೆ ಆಶ್ರಯ ಬೇರೆ; ಮಲ್ಚಿಂಗ್‌ಗಾಗಿ ಯಾವ ವ್ಯವಸ್ಥೆಯೂ ಇಲ್ಲ; ಅಂಥವರು ಮನೆಯಲ್ಲಿರುವ ರದ್ದಿ ಪೇಪರ್‌ಗಳನ್ನಾದರೂ  ಬೆಳೆಯ ನಡುವೆ ಹೊದಿಕೆಯಾಗಿಸಿ. ಹಳೇ ಗೋಣಿಚೀಲ, ಹರಿದ ಹತ್ತಿ ಬಟ್ಟೆಗಳಿದ್ದರೆ ಬಳಸಿ (ಪಾಲಿಥಿನ್, ಪ್ಲಾಸ್ಟಿಕ್ ಹಾಳೆಗಳನು ಬಳಸಬೇಡಿ). ಪ್ಲಾಸ್ಟಿಕ್‌ನಿಂದಾಗಿ ತಾಪಮಾನ ಅಧಿಕವಾಗುತ್ತದೆ. ಜೀವಾಣುಗಳು ಸಂಕಟಕಾರಿ ಪರಿಸ್ಥಿತಿಯಲ್ಲಿ ಬಳಲುತ್ತವೆ.

ಯಥೇಚ್ಛ ಮಟ್ಟದಲ್ಲಿ ಹೊದಿಕೆಯ ಪರಿಕರಗಳಿದ್ದರೂ ನಮ್ಮ ಬಹಳಷ್ಟು ತೋಟದ ಬೆಳೆಗಾರರು ಹೊದಿಕೆಯ ಮಹತ್ವ ಅರ್ಥಮಾಡಿಕೊಂಡಿರುವುದಿಲ್ಲ. ತೋಟಗಳಲ್ಲಿ ಸಾಕಷ್ಟು ನೆರಳಿದ್ದರೂ ತಂಪಿನ ವಾತಾವರಣವಿರುವುದಿಲ್ಲ. ಮತ್ತು ಹ್ಯೂಮಸ್ ನಿರ್ಮಾಣವಾಗುವುದಿಲ್ಲ. ಆಯಾಯ ಬೆಳೆಗಳಿಗೆ ಅಗತ್ಯವಾದ ಸೂರ್ಯ ರಶ್ಮಿಗಳ ಹೊಂದಾಣಿಕೆಯೂ ಅಲ್ಲಿ ಇರುವುದಿಲ್ಲ. ಅಂಥ ತೋಟವಿರುವ ರೈತರು ತೆಂಗು, ಅಡಿಕೆ, ಬಾಳೆ ಸಾಲುಗಳ ನಡುವೆ ಮೂರು ಅಡಿ ಅಗಲ, ಅರ್ಧ ಅಡಿ ಆಳದ ಕಾಲುವೆಗಳನ್ನು ತೋಡಿರಿ. ಕಾಲುವೆಯ ಮಣ್ಣನ್ನು ಎರಡೂಬದಿಯ ದಿಬ್ಬದ ಮೇಲೆ ಹರಡಿ. ದಿಬ್ಬದ ಎರಡೂ ಕಡೆಯೂ ಪ್ರತಿ ಒಂದು ಅಡಿಗೆ ಒಂದರಂತೆ ಅಲಸಂದೆ, ಸಜ್ಜೆ, ಜೋಳ, ರಾಗಿ, ನವಣೆ, ಹಾಗಲ, ಕುಂಬಳ, ಹೀರೆ, ಸೌತೆ, ಕಲ್ಲಂಗಡಿ, ಕರಬೂಜ ಬೀಜಗಳನ್ನು ನೆಡಬೇಕು. ಮಳೆ ಶುರುವಾಗುವ ಮುಂಚೆ ಬೀಜೋಪಚಾರ ಮಾಡಿದ ಬೀಜಗಳನ್ನು ನೆಡಬೇಕು. ಮಳೆ ಬಿದ್ದ ಮೇಲೆ ಇವೆಲ್ಲ ಚಿಗುರುತ್ತವೆ, ಬೆಳೆಯುತ್ತವೆ. ಬಳ್ಳಿ ಗಿಡಗಳು ಎಲ್ಲೆಲ್ಲಿ ಬಿಸಿಲು ಬೀಳುತ್ತೋ ಅಲ್ಲೆಲ್ಲ ಹಬ್ಬಿ ಇಡೀ ತೋಟವನ್ನೂ ಆವರಿಸಿಕೊಳ್ಳುತ್ತವೆ. ಫಸಲು ಬಂದಾಗ ತೆನೆಗಳನ್ನು ಕಟಾವು ಮಾಡಿ ಗಿಡಗಳನ್ನು ಹಾಗೆಯೇ ಬಿಡಿ. ಬಿತ್ತನೆಗಾಗಿಯೂ ಕೆಲ ಫಸಲುಗಳನ್ನು ಹಾಗೆಯೇ ಬಿಡಿ. ಬೀಜಗಳನ್ನು ಸಂಗ್ರಹಿಸಿಡುವ ತಾಪತ್ರಯ ಬೇಡ. ಹಕ್ಕಿಗಳು, ಇಲಿಗಳು, ಕೀಟಗಳು ತಿಂದು ಅಳಿದುಳಿದ ಬೀಜಗಳು ಮತ್ತೆ ಮೊಳೆತು ಇಡೀ ತೋಟವನ್ನು ಆವರಿಸಿಕೊಳ್ಳುವುದನ್ನು ಗಮನಿಸಿ. ನೀವು ನಿಮ್ಮ ಜವಾಬ್ದಾರಿಗಳನ್ನು ನಿಸರ್ಗಕ್ಕೆ ಹಸ್ತಾಂತರಿಸಿದರೆ ಮುಂದಿನ ಬೀಜಗಳನ್ನು ಅವು ಸಂರಕ್ಷಿಸುತ್ತವೆ. ಈ ತೋಟಗಳನ್ನು ಉಳುವ ಸಾಹಸಕ್ಕೆ ಕೈಹಾಕಬೇಡಿ. ಈ ಹಿಂದೆ ತೋಡಿದ ಆ ಕಾಲುವೆಯನ್ನು ತೆಂಗು ಮತ್ತು ಅಡಿಕೆಯ ಗರಿಗಳಿಂದ ಮುಚ್ಚಿ.

ಸಜೀವ ಹೊದಿಕೆಯ ವಿನ್ಯಾಸ

ಸಜೀವ ಹೊದಿಕೆ ಅಥವಾ Live Mulching ಅಂದಾಕ್ಷಣಕ್ಕೆ ಬೆಳೆಯ ನಡುವೆ ಏನಾದರೂ ಬೆಳೆದುಕೊಳ್ಳಬಹುದು ಎಂದರ್ಥವಲ್ಲ. ಕಳೆಗಳ ಸಮುಚ್ಛಯವೂ ಸಜೀವವೆ. ಇಲ್ಲಿ ನಮ್ಮ ಮುಖ್ಯ ಕಾಳಜಿ ಪ್ರಧಾನ ಬೆಳೆಯೊಂದಿಗೆ ಅಂತರ ಬೆಳೆ ಮತ್ತು ಮಿಶ್ರ ಬೆಳೆಯನ್ನು ಆಯೋಜಿಸುವುದಾಗಿರಬೇಕು. ಆ ಮೂಲಕ ಕಳೆ ಮತ್ತು ಕೀಟಗಳ ನಿಯಂತ್ರಣ; ಜೊತೆಗೆ ಆರ್ದ್ರತೆ ಕಾಪಾಡುವಂಥದ್ದಾಗಿರಬೇಕು. ಈ ಬಗೆಯ ಬೇಸಾಯ ಕ್ರಮದಲ್ಲಿ ಹೆಚ್ಚಿನ ಆದಾಯ ಸಾಧ್ಯ ಅನ್ನುವುದನ್ನು ಹೆಚ್ಚುವರಿಯಾಗಿ ಹೇಳಬೇಕಾಗಿಲ್ಲ ಅಲ್ಲವೆ?

ಹಬ್ಬಿದ ಬಳ್ಳಿಯ ಮಡಿಲಲ್ಲಿ ಮಲಗಿರುವ ಬೂದುಗುಂಬಳ

ನಾವು ಯಾವುದೇ ಅಂತರಬೆಳೆ, ಮಿಶ್ರಬೆಳೆ ಬೆಳೆವಾಗ ಮುಖ್ಯ ಬೆಳೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲಿ ಅನಗತ್ಯ ಪೈಪೋಟಿ ಏರ್ಪಡಬಾರದು. ಒಂದು ಮಟ್ಟದವರೆಗೆ, ಒಂದು ಪ್ರಮಾಣದವರೆಗೆ ಪೈಪೋಟಿ ಇದ್ದರೆ ಒಳ್ಳೆಯದು. ಆದರೆ ಆ ಪೈಪೋಟಿ ವಿರುದ್ಧವೇ ಆ ಗಿಡ ಸದಾ fight ಮಾಡುವಂಥ ಸಂದರ್ಭ ಸೃಷ್ಟಿಯಾಗಕೂಡದು. ಇವೆಲ್ಲದರ ಜೊತೆಗೆ ಮುಖ್ಯ ಬೆಳೆಯ ಬಾಲ್ಯಾವಸ್ಥೆಯಲ್ಲೇ ಅಂತರಬೆಳೆ ಮತ್ತು ಮಿಶ್ರ ಬೆಳೆಗಳನ್ನು ಡಿಸೈನ್ ಮಾಡಿಕೊಳ್ಳಬೇಕು.

ಬಾಳೆ, ಕಬ್ಬು ಬಿತ್ತನೆ ಮಾಡುವಾಗಲೆ ಇತರ ಉಪಬೆಳೆಗಳ ಬಿತ್ತನೆ ಮಾಡಬೇಕು. ಬಾಳೆ-ಕಬ್ಬುಗಳ ಫಸಲಿನ ಅವಧಿ ೨೭ ನಕ್ಷತ್ರಗಳು. ಒಂದು ನಕ್ಷತ್ರ(ಮಳೆ)ದ ಅವಧಿ ೧೫ ದಿವಸ. ಮೊದಮೊದಲು ಕಬ್ಬು ೨೧ ನಕ್ಷತ್ರಗಳ ಬೆಳೆಯಾಗಿತ್ತು. ಈಗ ೨೭ ನಕ್ಷತ್ರಗಳ ಬೆಳೆಯಾಗಿದೆ. ನಾವೀಗ ಮಿಶ್ರ ಬೆಳೆಯನ್ನು ಕಬ್ಬಿನ ಫಸಲಲ್ಲಿ ಅಳವಡಿಸೋಣ. ಕಬ್ಬಿನ ಬಿತ್ತನೆಯ ಮೊದಲ ಒಂಬತ್ತು ಮಳೆ ನಕ್ಷತ್ರಗಳ ಅವಧಿ ಅದರ ಬಾಲ್ಯಕಾಲ. ಹೀಗಾಗಿ ಕಬ್ಬಿನ ಸೆರಗಲ್ಲಿ ನೆಡುವ ಫಸಲುಗಳು ನಾಲ್ಕು ತಿಂಗಳ ಅವಧಿಯೊಳಗೆ ಕಟಾವು ಆಗುವಂತಿರಬೇಕು. ಕಬ್ಬಿನ ಎಂಟು ಅಡಿ ಅಂತರದ ಸಾಲುಗಳಲ್ಲಿ ಬೆಳೆವ ಇತರ ಬೆಳೆಗಳು ಸಹಜೀವನಕ್ಕೆ ಪೂರಕವಾಗಿರಬೇಕು. ಮುಖ್ಯ ಬೆಳೆಯನ್ನು ತಾಯಿಯಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಇದರ ಜೊತೆಗೆ ಅತಿ ಶೀಘ್ರವಾಗಿ ಬೆಳೆದು ನೆರಳು ಕೊಡುವಂಥಾಗಬೇಕು. ಕಬ್ಬು ಕಟಾವು ಆಗುವವರೆಗೆ ಆದಾಯ ತರುವಂಥಾಗಿರಬೇಕು, ಬಹಳ ಕಾಲದವರೆಗೆ ಸಂಗ್ರಹಿಸಿಡುವಂಥಾಗಿರಬೇಕು ಮತ್ತು ಒಣ ಹೊದಿಕೆ ಮತ್ತು ಸಜೀವನ ಹೊದಿಕೆ ಪರಸ್ಪರ ಪೂರಕವಾಗಿಬೇಕು. ಕಡೆಯದಾಗಿ ಪ್ರಮುಖ ಬೆಳೆ ಏಕದಳದ್ದಾಗಿರುವಾಗ ದ್ವಿದಳ ಧಾನ್ಯಗಳನ್ನು, ದ್ವಿದಳಗಳೇ ಪ್ರಮುಖವಾಗಿದ್ದಾಗ ಏಕದಳ ಬೆಳೆಗಳಿಗೆ ಆದ್ಯತೆ ನೀಡಬೇಕು.

ಸಾವಯವ ಕಾರ್ಬನ್ ಮತ್ತು ನೈಟ್ರೋಜನ್ ಬೆರತಾಗಲೇ ಹ್ಯೂಮಸ್ ನಿರ್ಮಾಣ ಸಾಧ್ಯ ಅನ್ನವುದು ನೆನಪಿನಲ್ಲಿರಲಿ.

ಬಯೋ ಡೈವರ್ಸಿಟಿ

ನಿಸರ್ಗವು ಎಂದೆಂದಿಗೂ ಏಕ ಬೆಳೆ ಪದ್ಧತಿಯನ್ನು ಒಪ್ಪುವುದಿಲ್ಲ. ಮನೋಕ್ರಾಪ್ ನಮ್ಮ ಆಧುನಿಕ ಕೃಷಿ ವಿಜ್ಞಾನದ ಬಳುವಳಿ. ಇದರಿಂದಾಗಿರುವ ಹಾನಿ ಹೇಳತೀರದು. ಬರೀ ರಾಗಿ, ಭತ್ತ ಅಥವಾ ಗೋಧಿ ಬೆಳೆದೂ, ಬೆಳೆದೂ ಇತರೆಲ್ಲ ಅಗತ್ಯಗಳಿಗೆ ಮಾರುಕಟ್ಟೆ ಅವಲಂಬಿಸುವುದನ್ನೂ ನಮ್ಮ ರೈತರು ರೂಢಿ ಮಾಡಿಕೊಂಡುಬಿಟ್ಟಿದ್ದಾರೆ. ಯೂನಿಫಾರ್ಮಿಟಿ ಅನ್ನುವುದು ನೈಸರ್ಗಿಕ ಪರಿಸರದಲ್ಲಿ ಇರುವುದಿಲ್ಲ. ಇವತ್ತಿನ ಹೈಟೆಕ್ ಕೃಷಿ ಕೂಡ ಲಕ್ಷಾಂತರ ಎಕರೆ ವಿಸ್ತೀರ್ಣಗಳಲ್ಲಿ ಒಂದೇ ಬಗೆಯ ಬೆಳೆ ಬೆಳೆಯಲು ಪ್ರೋತ್ಸಾಹಿಸುತ್ತದೆ. ಸಾಮೂಹಿಕ ನಿಂಬೆ ವನಗಳು, ದಾಳಿಂಬೆ ವನಗಳು, ತೆಂಗು, ಕಬ್ಬು, ಬಾಳೆ, ಅಡಿಕೆ ತೋಟಗಳು ಇವತ್ತು ಅನುಭವಿಸುತ್ತಿರುವ ದುಃಸ್ಥಿತಿಯನ್ನು ನಾವು ನೋಡುತ್ತಿದ್ದೇವೆ.

ರೈತ ಖರೀದಿ ವಿಷಯದಲ್ಲಿ ಸಂತೆಗಳತ್ತ, ಪೇಟೆಗಳತ್ತ ನೋಡಬಾರದು. ಕೃಷಿ ಕುಟುಂಬಕ್ಕೆ ಅಗತ್ಯವೆನಿಸಿದ ಎಲ್ಲವನ್ನೂ, ಆ ಹವಾಮಾನ, ಮಣ್ಣಿಗೆ ಒಗ್ಗುವ ಎಲ್ಲವನ್ನೂ ಬೆಳೆಯಬೇಕು. ವರ್ಷಪೂರ್ತಿ ಜೀವನಕ್ಕೆ ಬೇಕಾಗುವ ಸೊಪ್ಪು, ತರಕಾರಿ, ಹಣ್ಣು ಹಾಗೂ ಧಾನ್ಯಗಳಿಗೆ ಯೋಜನೆ ರೂಪಿಸಿ-ಆಮೇಲೆ ಮಾರುಕಟ್ಟೆಯ ಅಗತ್ಯಗಳನ್ನು ಗಮನಿಸಬೇಕು. ಮಾರುಕಟ್ಟೆ ಅನ್ನುವುದು ಬೆಳೆಗಾರ ಮತ್ತು ಬಳಕೆದಾರರ ನಡುವಿನ ಸಂಬಂಧಗಳನ್ನು ಬಲಪಡಿಸುವಂತಿರಬೇಕು. ಯಾವುದೇ ಕೃಷಿ ಜಮೀನಿನಲ್ಲಿ ಬೆಳೆ ವೈವಿಧ್ಯತೆ ಹೆಚ್ಚಾದಷ್ಟು ಭೂಮಿಯ ಆರೋಗ್ಯ, ರೈತನ ಆರೋಗ್ಯ ವೃದ್ಧಿಯಾಗುತ್ತ ಹೋಗುತ್ತದೆ. ಉಪಕಾರಿ ಕೀಟಗಳು ಹೆಚ್ಚಾಗಿ ಹಾನಿಕಾರಕ ಕೀಟಗಳು ಅವನತಿಯ ಹಾದಿ ಹಿಡಿಯುತ್ತವೆ. ನಿಸರ್ಗ ಕೃಷಿಯಲ್ಲಿ ಫಸಲು ಕೊಡುವ ಗಿಡಮರಗಳ ಜೊತೆಗೆ ಮನೆ ಮದ್ದಿಗಾಗಿ ಔಷಧಿ ಸಸ್ಯಗಳು; ಕೀಟನಾಶಗಳಿಗಾಗಿ ಹೊಂಗೆ, ಬೇವು, ಎಕ್ಕ, ಲಂಟಾನ, ದತ್ತೂರಿ, ಲಕ್ಕಿ, ಬಿಲ್ಪತ್ರೆ, ತಂಬಾಕು ಇತ್ಯಾದಿ ಮರ-ಗಿಡ-ಬಳ್ಳಿಗಳು ಅಲ್ಲಲ್ಲಿ ಇರಲಿ. ಕೃಷಿ ಭೂಮಿಯಲ್ಲಿ ಡೈವರ್ಸಿಟಿ ಹೆಚ್ಚಾದಷ್ಟು ಅದರ ಸೊಬಗು ಹೆಚ್ಚಾಗುತ್ತದೆ. ಬಣ್ಣ, ಬಣ್ಣದ ಚಿಟ್ಟೆಗಳ, ಹಕ್ಕಿಗಳು, ಜೀರುಂಡೆಗಳು ವಿಶೇಷ ಮೆರುಗು ನೀಡುತ್ತವೆ. ಅನುಗಾಲವೂ ಆವರಿಸಿಕೊಳ್ಳುವ ಫಲ, ಪುಷ್ಪಗಳ ಗಂಧ, ಸುಗಂಧಗಳು ಮುದ ನೀಡುತ್ತವೆ.

ಪರಸ್ಪರ ಸಹಚರ್ಯ

ಕೃಷಿಭೂಮಿಯಲ್ಲಿರಬೇಕಾದ ಬೆಳೆ ವೈವಿಧ್ಯತೆಗಳೊಂದಿಗೆ ಮತ್ತೊಂದು ಸಂಗತಿಯನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಕೆಲವು ಗಿಡಗಳೊಂದಿಗೆ; ಕೆಲವು ಗಿಡಗಳು ಬಹಳ ಫ್ರೆಂಡ್ಲಿಯಾಗಿರುತ್ತವೆ. ಗಿಡಗಳೂ ಕೂಡ ಸ್ನೇಹಮಯ ವಾತಾವರಣವನ್ನು ಬಯಸುತ್ತವೆ. ಪ್ರತಿನಿತ್ಯ ಎದ್ದೂಬಿದ್ದು ಜಮೀನುಗಳಲ್ಲಿರುವ ರೈತರಿಗೆ ಇವೆಲ್ಲ ಅರ್ಥವಾಗುತ್ತವೆ. ಅಷ್ಟೇ ಮಟ್ಟಿಗೆ ಗಿಡಗಳಿಗೆ ರೈತನ ಸಂಸರ್ಗ ಬೇಕು.

ಕಬ್ಬು, ಬಾಳೆ, ಪರಂಗಿ ಬೆಳೆಗಳ ನಡುವೆ ಈರುಳ್ಳಿ, ಅಲಸಂದೆ, ಹಸಿಮೆಣಸಿನಕಾಯಿ, ಚೆಂಡುಹೂ, ನುಗ್ಗೆ… ಈ ಗುಂಪಿನ ಬೆಳೆಗಳಿರಬೇಕು. ತೋಟಗಾರಿಕೆಯಲ್ಲಿ ಅರಿಶಿಣದ ಬೆಳೆಯೊಂದಿಗೆ ಈರುಳ್ಳಿ, ನುಗ್ಗೆ, ಹಸಿಮೆಣಸಿನಕಾಯಿ ಗಿಡ The best combination. ಹತ್ತಿ ಗಿಡದ  ಬಳಿ ಅಲಸಂದೆ ಇದ್ದರೆ ಹತ್ತಿಗೆ ಎರಗುವ ಕೀಟಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸಾರಜನಕ ಪೂರೈಸುತ್ತದೆ. ಕಬ್ಬು, ಬಾಳೆ, ಪರಂಗಿ(ಪಪ್ಪಾಯಿ) ಬೆಳೆಗಳ ನಡುವೆ ಈರುಳ್ಳಿ, ಹಸಿಮೆಣಸಿನ ಕಾಯಿ, ಅಲಸಂದೆ, ಚೆಂಡುಹೂ ಮತ್ತು ನುಗ್ಗೆ ಗಿಡಗಳ ಪರಿಣಾಮ ಗಮನಿಸಿ.

ಈರುಳ್ಳಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸೂರ್ಯನಿಂದ ನೀಲಾತೀತ ಕಿರಣ (ಕಾಸ್ಮಿಕ್ ಎನರ್ಜಿ)ಗಳನ್ನು ಹಿಡಿದಿಟ್ಟು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ವಿದ್ಯುತ್ ಕಾಂತೀಯ ಅಲೆಗಳನ್ನು ಸೃಷ್ಟಿಸಿ ಭೂಮಿಯಲ್ಲಿರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಂಶವನ್ನು ಚಾರ್ಜ್ ಮಾಡುತ್ತದೆ. ಸಣ್ಣ ಈರುಳ್ಳಿ ಅಥವಾ ಸಾಂಬರ್ ಈರುಳ್ಳಿಗಳು ಈ ಬೆಳೆಗಳೊಂದಿಗಿರಲಿ. ಈರುಳ್ಳಿ ಎಳೆಗಳು ಪಿರಿಮಿಡ್ ಆಕೃತಿಯಲ್ಲಿರುವುದರಿಂದ ಆ ಎಫೆಕ್ಟ್ ಕೂಡ ನಿಸರ್ಗಕ್ಕೆ ಲಭ್ಯ. ಯಥಾಪ್ರಕಾರ ಅಲಸಂದೆಯ ಬೇರುಗಳಲ್ಲಿ ಹೆಚ್ಚು ಗಂಟುಗಳಿದ್ದು, ಅವುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಿಂದ ಹೆಚ್ಚಿನ ಸಾರಜನಕವನ್ನು ಹೀರುತ್ತವೆ. ಮುಖ್ಯ ಬೆಳೆಗಳ ಸಾರಜನಕದ ದಾಹವನ್ನು ಪರಿಹರಿಸುತ್ತವೆ. ಜೀವಿತಾವಧಿಯಲ್ಲಿ ಸಾರಜನಕ ದಾಹವನ್ನು ಪರಿಹರಿಸುತ್ತವೆ. ಜೀವಿತಾವಧಿಯಲ್ಲಿ ಜೀವಂತ ಜೈವಿಕ ಹೊದಿಕೆಯಾಗಿಯೂ, ಅನಂತರ ಕಾಷ್ಠ ಅಚ್ಛಾದನವಾಗಿಯೂ ಮಣ್ಣನ್ನು ಸಜೀವಗೊಳಿಸುತ್ತದೆ. ಹಸಿಮೆಣಸಿನಕಾಯಿ ಗಿಡದಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಈ ಗಿಡಗಳಿಗೆ ಹೆಚ್ಚು ಬಿಸಿಲು ಬೇಕಾಗಿಲ್ಲ. ನೆರಳಿನಲ್ಲೂ ಬೆಳೆಯುತ್ತವೆ. ಬಾಳೆ, ಪರಂಗಿ, ಕಬ್ಬು ಇವುಗಳಿಗೆ ನೆರಳು ಒದಗಿಸುತ್ತವೆ. ಗಿಡದ ಬೇರುಗಳಲ್ಲಿ ಗಂಟುಗಳಿರುತ್ತವೆ. ಈ ಗಂಟುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಿಂದ ಸಾರಜನಕ ಪಡೆಯುತ್ತವೆ. ಬೇರುಗಳಲ್ಲಿ ಕೆಲವು ಗ್ರಂಥಿಗಳೂ ಇವೆ. ಅವು ಆಲ್ಕಲೇಡ್ ಸೇರಿದಂತೆ ಇತರ ರಾಸಾಯನಿಕಗಳನ್ನು ದ್ರವಿಸಿ ಮುಖ್ಯ ಬೆಳೆಗಳಿಗೆ ಪೂರೈಸುತ್ತವೆ. ಕೆಲವು ಬೇರುಗಳು ಸೂಕ್ಷ್ಮ ಅನ್ನದ್ರವ್ಯಗಳನ್ನು ತಯಾರಿಸುತ್ತವೆ. ಇಷ್ಟಲ್ಲದೆ ಮೆಣಸಿನಕಾಯಿ ಗಿಡದ ಬೇರುಗಳಲ್ಲಿ AZOTO BACTER, AZO SPIRILLUM, BIEGERINKIA ಬ್ಯಾಕ್ಟೀರಿಯಾಗಳು ಇವೆ. ಇವೂ ಕೂಡ ನೈಟ್ರೋಜನ್ ಸ್ಥಿರೀಕರಿಸುತ್ತವೆ. ಇಷ್ಟಲ್ಲದೆ ಹಸಿಮೆಣಸಿಕಾಯಿಗೆ ಮಾರುಕಟ್ಟೆ ಬಿದ್ದಾಗ, ಅವುಗಳನ್ನು ಹಣ್ಣಾಗಲು ಬಿಟ್ಟು, ಒಣಗಿಸಿ ಪುಡಿ ಮಾಡಿ ಯೋಗ್ಯ ಬೆಲೆ ಬಂದಾಗ ಮಾರುವ ಅವಕಾಶವೂ ಇದೆ.

ಚೆಂಡುಹೂ, ಸೇವಂತಿಗೆಗಳು ತೋಟದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಆರ್ಥಿಕವಾಗಿಯೂ ಲಾಭ ತರುತ್ತವೆ. ಇವುಗಳ ಬೇರುಗಳಲ್ಲಿ ಚಿಕಿತ್ಸಾಕಾರಿ ಔಷಧಿ ಗುಣಗಳಿವೆ. ಬಾಳೆಗೆ NEMATODE ಬಂದರೆ ಈ ಪ್ರಪಂಚದ ಯಾವ ಮೂಲೆಯಲ್ಲೂ ಔಷಧಿ ಇಲ್ಲ. ಪ್ರಪಂಚದ ಯಾವ ಕೀಟನಾಶಕ ಬಳಸಿದರೂ ಬಾಳೆಯನ್ನು NEMATODE ನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. NEMATODE ಲಾಡಿ ಹುಳು ತರದ ಜಂತು. ಇವು ತೆಂಗು, ಅಡಿಕೆ, ಬಾಳೆ, ಟೊಮ್ಯಾಟೊ ಮುಂತಾದ ಬೆಳೆಗಳ ಬೇರುಗಳಲ್ಲಿರುವ ಗಂಟುಗಳಲ್ಲಿ ಸೇರಿಕೊಳ್ಳುತ್ತವೆ. ಇವು ಸೇರಿಕೊಂಡ ಯಾವ ಬೆಳೆಯೂ ಊರ್ಜಿತವಾಗುವುದಿಲ್ಲ. ಇಳುವರಿ ಕಡಿಮೆಯಾಗುತ್ತದೆ; ಗಿಡಮರ ಸೊರಗುತ್ತವೆ. ಸಂಪೂರ್ಣವಾಗಿ ಬೆಳೆ ಕಿತ್ತುಹಾಕಿದರೂ ಸತತವಾಗಿ ೨೦ ವರ್ಷಗಳ ಕಾಲ ಇವು ಆ ಭೂಮಿಯಲ್ಲೇ ಸೇರಿಕೊಂಡಿರುತ್ತವೆ. (ವಿಶೇಷವಾಗಿ ಬಾಳೆಯ ಪಾಲಿಗೆ ಬಂಚಿಟಾಪ್, ಪನಾಮವಿಲ್ಟ್ ಮತ್ತು ಈ NEMATODE ಮಾರಣಾಂತಿಕ) ಈ ಹುಳು ಬಂತೆಂದರೆ ಇಡೀ ಬಾಳೆಯೇ ಸರ್ವನಾಶ. ಈ NEMATODE ನಾಶಕ್ಕೆ ಪರಿಹಾರ ಕಂಡುಹಿಡಿದ ಪ್ರಪಂಚದ ಏಕೈಕ ಕೃಷಿ ವಿಜ್ಞಾನಿ ನಮ್ಮ ಸುಭಾಷ್ ಪಾಳೇಕರ್, ಬಂಚಿಟಾಪ್, ಪನಾಮವಿಲ್ಟ್ ರೋಗಗಳಿಗೂ ನಿಸರ್ಗ ಕೃಷಿಯಲ್ಲಿ ಅತೀ ಸರಳವೆನಿಸುವ ಪರಿಹಾರವಿದೆ ಅದು ಜೀವಾಮೃತ! ಜೀವಾಮೃತದಲ್ಲಿರುವ ರೋಗನಿರೋಧಕ ಶಕ್ತಿ ಬಾಳೆಯ ಬಳ ಪನಾಮವಿಲ್ಟ್, ಬಂಚಿಟಾಪ್ ರೋಗಗಳನ್ನು ಸುಳಿಯಗೊಡುವುದಿಲ್ಲ. ಚೆಂಡುಹೂ ಮತ್ತು ಸೇವಂತಿಗೆಯ ಗಿಡದ ಬೇರುಗಳಲ್ಲಿ ALPHATERTHONILE ALKALOID ಮತ್ತು ALFA TOXIN ಎಂಬ ರಾಸಾಯನಿಕಗಳಿವೆ. ಇವು ಬಾಳೆ, ತೆಂಗು, ಅಡಿಕೆ, ಟೊಮ್ಯಾಟೊ ಮುಂತಾದ ಬೆಳೆಯ ಬೇರುಗಳ ಗಂಟುಗಳಲ್ಲಿ ಸೇರಿಕೊಂಡಿರುವ NEMATODE ಗಳನ್ನು ನಾಶಪಡಿಸುತ್ತವೆ.

ನುಗ್ಗೆ (ಡ್ರಮ್‌ಸ್ಟಿಕ್) ಬಹುವಾರ್ಷಿಕ ಉತ್ಪನ್ನದ ಬೆಳೆ. ಇದರ ಸೊಪ್ಪು, ಕಾಯಿಗಳಲ್ಲಿ ಹೇರಳವಾದ ಕಬ್ಬಿಣದ ಅಂಶವಿದೆ. ರಕ್ತಶುದ್ಧಿ, ದೃಷ್ಟಿದೋಷ ಪರಿಹಾರ ಇದರ ವಿಶೇಷಗುಣ. ನೆರಳಿನ ಅಗತ್ಯವಿರುವ ಬೆಳೆಗಳ ನಡುವೆ ಮೊದಲ ಆಯ್ಕೆ ನುಗ್ಗೆಯೆ. ನುಗ್ಗೆ ಬಹಳ ವೇಗವಾಗಿ ಬೆಳೆಯುತ್ತದೆ. ಆರು ತಿಂಗಳಿಗೊಮ್ಮೆ ಕಾಯಿಬಿಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇದರ ಬೇರುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಿಂದ ಸಾರಜನಕ ಸ್ವೀಕರಿಸಿ ಮುಖ್ಯ ಬೆಳೆಗೆ ಸರಬರಾಜು ಮಾಡುತ್ತವೆ. ಜೊತೆಗೆ ನುಗ್ಗೆ ಅತ್ಯುತ್ತಮ ಮಲ್ಚಿಂಗ್ ಸಾಧನ. ನೆರಳಿಗಾಗಿ, ಸೊಪ್ಪು, ತರಕಾರಿಗಾಗಿ, ಸಾರಜನಕ ಸ್ಥಿರೀಕರಣಕ್ಕಾಗಿ ಸತತವಾಗಿ ನುಗ್ಗೆ ಬೆಳೆಯುತ್ತಿದ್ದರೆ ಭೂಮಿಯ ಮೇಲ್ಮಣ್ಣು ಅತಿ ಶೀಘ್ರದಲ್ಲಿ ಅಭಿವೃದ್ಧಿಯಾಗುತ್ತದೆ. ಅಷ್ಟೇ ತೀವ್ರಗತಿಯಲ್ಲಿ ಹ್ಯೂಮಸ್ ಕೂಡ ರೂಪುಗೊಳ್ಳುತ್ತದೆ.

ಬಾಳೆ, ಕಬ್ಬು, ಪಪ್ಪಾಯಿ ಬೆಳೆಗಳ ನಡುವೆ ಈರುಳ್ಳಿ, ಹಸಿಮೆಣಸಿನಕಾಯಿ ಗಿಡ, ನುಗ್ಗೆ, ಚೆಂಡುಹೂ, ಅಲಸಂದೆ ಗಿಡಗಳಿರುವ ನೈಸರ್ಗಿಕ ಕೃಷಿ ಪರಿಸರದಲ್ಲಿ ಮಿತ್ರ ಕೀಟಗಳ ಆಶ್ರಯ ಪಡೆಯುತ್ತವೆ. ಇವು ಫಸಲನ್ನು ವ್ಯವಸ್ಥಿತ ರೀತಿಯಲ್ಲಿ ಸಂರಕ್ಷಿಸುತ್ತವೆ. ಮೇಲೆ ವಿವರಿಸಿರುವ ಬೆಳಗಳ ಆವರಣದಲ್ಲಿ ಆಶ್ರಯ ಪಡೆಯುವ ಮಿತ್ರ ಕೀಟಗಳು ಇಂತಿವೆ.

೧. CRYSOPA CARNIA (ಕ್ರೈಸೋಪ ಕಾರ್ನಿಯಾ)

೨. ASTRELIAN LADYBUG BEETLE (ಆಸ್ಟ್ರೇಲಿಯನ್ ಲೇಡಿಬಗ್ ಬೀಟಲ್)

೩. MICRO NUMOUS SPI (ಮೈಕ್ರೋ ನ್ಯೂಮಸ್ ಸ್ಪೈಸೀಸ್)

೪. KONOBRATHA APHYDIVORA (ಕೋನೋಬ್ರಥಾ ಅಫಿಡಿವೊರ)

ಇವುಗಳನ್ನು ಕ್ಷೇತ್ರಪಾಲಕರು ಎಂದು ಬೇಕಾದರೂ ಕರೆಯಿರಿ. ಇವತ್ತು ಮಾನೋಕ್ರಾಪ್‌ನ ಅನಿವಾರ್ಯ ಪೀಡೆಯಾಗಿ ದೇಶದಾದ್ಯಂತ ಎಲ್ಲೆಲ್ಲೂ ಕಬ್ಬು ಬೆಳೆಗೆ ಬಿಳಿ ಹೇನುಗಳು ಮುತ್ತಿಗೆ ಹಾಕಿವೆ. ಪ್ರತಿನಿತ್ಯ ಅಗಣಿತ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿವೆ. ಪೂನಾದ ಕಬ್ಬು ಸಂಶೋಧನಾ ಕೇಂದ್ರದವರು, ದೇಶದ ಕೃಷಿ ವಿಶ್ವವಿದ್ಯಾಲಯಗಳೆಲ್ಲ ಬಿಳಿ ಹೇನು ನಿರ್ಮೂಲನೆಗಾಗಿ ಸತತ ಸಂಶೋಧನೆಯಲ್ಲಿ ನಿರತವಾಗಿವೆ. ಸರಕಾರ ಮತ್ತು ಕೃಷಿ ಇಲಾಖೆಗಳು ಸಹಸ್ರಾರು ಕೋಟಿ ರೂಪಾಯಿಗಳ ವಿಷವನ್ನು ಬಿಳಿ ಹೇನಿನ ಮೇಲೆ ಪ್ರಯೋಗಿಸಿ ಕೈಚೆಲ್ಲಿ ಕುಳಿತಿದೆ. ತೆಂಗಿಗೆ ಬಂದಿರುವ ನುಸಿಯಂತೆಯೇ ಕಬ್ಬಿಗೆ ಬಂದಿರುವ ಬಿಳಿ ಹೇನು ಯಾವ ವಿಷಕ್ಕೂ ಜಗ್ಗುತ್ತಿಲ್ಲ. ಆದರೆ ನೈಸರ್ಗಿಕ ಕೃಷಿಯ ಕಬ್ಬು ನೋಡಬನ್ನಿ. ಬಿಳಿ ಹೇನು ಇಲ್ಲಿಗೆ ದಾಳಿ ಇಡುವುದಿಲ್ಲ. ಬನ್ನೂರಿನ ನವೀನ್, ಮಂಡ್ಯ ಜಿಲ್ಲೆಯ ಹಾಡ್ಯಗ್ರಾಮದ ರಮೇಶ್‌ರಾಜುರವರ ತೋಟ ನೋಡಿ ಈ ನಿರ್ಧಾರಕ್ಕೆ ಬರುವುದು ಬೇಡ. ನೈಸರ್ಗಿಕ ಕೃಷಿಯ ಯಾವುದೇ ಕಬ್ಬು ಬೆಳೆ ನೋಡಿ- ಎಲ್ಲಿಯೂ ಬಿಳಿ ಹೇನು ಪ್ರವೇಶಿಸಿಲ್ಲ! ಈ ಹಿನ್ನೆಲೆಯಲ್ಲೆ ನಾವು ಬೆಳೆ ವೈವಿಧ್ಯತೆಗೆ ಹೆಚ್ಚಿನ ಗಮನ ಕೊಡಬೇಕು ಮತ್ತು ಸಾಧ್ಯವಾದಷ್ಟು ಪರಸ್ಪರ ಸಹಕಾರಭಾವ ಪ್ರದರ್ಶಿಸುವ ಗಿಡಗಳನ್ನು ಆಯೋಜಿಸುವ ಮೂಲಕ ಮಿತ್ರ ಕೀಟಗಳಿಗೆ ಆಶ್ರಯಧಾಮ ಕಲ್ಪಿಸಬೇಕು.

ಆಟಿಯಹುಣ್ಣಿಮೆ (ಪದ್ಯದಆಯ್ದಭಾಗ)ಎಳೆಬಿಸಿಲನ್ನು ನೆಲಜಲವನ್ನು-
ತಬ್ಬುತ ಲೋಕವ ಬೆಳಗುವುದಿನ್ನು
ಪಯಿರಿನ ತೆನೆಯು ಕಂಪಿನ ಮೊನೆಯು
ಮಂಗಳದುಷೆ ರಮಣಿಯ ಮನೆಯು
ದುಂಬಿಯ ದಂಡು ಹಕ್ಕಿಯ ಹಿಂಡು
ಹಾರುತಲಿರುವುದು ಗಿಳಿವಿಂಡು
ಎಳೆಬಿಸಿಲಾಡುತಿದೆ- ಈಗಲೆ
ಕತ್ತಲೆಯೋಡುತಿದೆ

- ಪೇಜಾವರ ಸದಾಶಿವರಾವ್.

ನೆರಳು - ಬೆಳಕುಗಳ ವಿನ್ಯಾಸ

ಮರ-ಗಿಡಗಳ ಬೆಳವಣಿಗೆಯಲ್ಲಿ ಸೂರ್ಯ ರಶ್ಮಿಗಳ ಪಾತ್ರ ಬಹಳ ಮಹತ್ವದ್ದು. ಈ ಹಿಂದೆಯೇ ಈ ಕುರಿತು ಗಮನಹರಿಸಿದ್ದೇವೆ. ಸೂರ್ಯನ ಸೌಮ್ಯತೆ, ಪ್ರಖರತೆಗಳನ್ನಾಧರಿಸಿಯೆ ನಾವು ಪ್ರಪಂಚದ ಆಯಾಯ ಭೌಗೋಳಿಕ ಪ್ರದೇಶಗಳ ಕೃಷಿ ವಿದ್ಯಮಾನಗಳನ್ನು ಅರಿಯಬಹುದು. ಹಾಗೆಯೇ ಆಹಾರಕ್ರಮ, ಪಶುಸಂಪತ್ತು, ಜನಸಂಸ್ಕೃತಿ ಇತ್ಯಾದಿಗಳನ್ನು ಕೂಡ. ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟನ್‌ನವರಿಗೆ ತಿಂಗಳುಗಟ್ಟಲೆ ಸೂರ್ಯ ದರ್ಶನವಿರುವುದಿಲ್ಲ. ಅವರ ವಿಸ್ತರಣಾ ದಾಹದ ಆಳದಲ್ಲಿ ಬೆಳಕಿನ ದಾಹವೆಂಬುದು ಅಗೋಚರ ರೀತಿಯಲ್ಲಿ ಮಡುಗಟ್ಟಿತ್ತೆ? ಇಷ್ಟಾದರೂ ಬಿಸಿಲಿರದ ದೇಶಗಳು ಬಿಸಿಲಿರುವ ದೇಶಗಳ ಮಾರುಕಟ್ಟೆ ಆಳುತ್ತಿರುವುದು ವಿಪರ್ಯಾಸ ಅಲ್ಲವೆ?

ಇರಲಿ, ನಮ್ಮಲ್ಲಂತೂ ಬಿಸಿಲಿಗೆ ಬರವಿಲ್ಲ. ಬೇಸಿಗೆಯಲ್ಲಿ ಸೂರ್ಯನ ಪ್ರಖರತೆ ೧೦,೦೦೦ ದಿಂದ ೧೨,೦೦೦ ft ಕ್ಯಾಂಡಲ್‌ವರೆಗಿರುತ್ತದೆ. ಮಳೆಗಾಲದಲ್ಲಿ ಸರಾಸರಿ ೭,೦೦೦ ft ಕ್ಯಾಂಡಲ್‌ವರೆಗಿರುತ್ತದೆ. ft ಕ್ಯಾಂಡಲ್ ಅಂದರೇನು? ಒಂದು ಮೇಣದ ಬತ್ತಿ ಹಚ್ಚಿ ಇಡಿ. ಆ ಮೇಣದ ಬತ್ತಿಯ ಒಂದು ಅಡಿ ಆವರಣದ ಬೆಳಕಿನ ಪ್ರಖರತೆಗೆ- ಒಂದು ft ಕ್ಯಾಂಡಲ್ ಎಂದು ಕರೆಯಲಾಗುತ್ತದೆ. ಹಾಗೆಯೇ ೧೨ ಸಾವಿರ ಕ್ಯಾಂಡಲ್‌ಗಳನ್ನು ವೃತ್ತದಲ್ಲಿಟ್ಟು ಬೆಳಕು ಹಚ್ಚಿ. ಆ ಹನ್ನೆರಡು ಸಾವಿರ ಮೇಣದ ಬತ್ತಿಗಳ ಸುತ್ತಲ ಒಂದು ಅಡಿ ಆವರಣದ ಬೆಳಕಿಗೆ ೧೨ ಸಾವಿರ ft ಕ್ಯಾಂಡಲ್ ಎಂದು ಕರೆಯಲಾಗುತ್ತದೆ. ಈ ಪ್ರಖರತೆ ಬೇಸಿಗೆ ದಿನಗಳ ನಡುಮಧ್ಯಾಹ್ನದ ಬಿಸಿಲಿನ ಪ್ರಖರತೆಗೆ ಸಮ. ಈ ಹಿನ್ನೆಲೆಯಲ್ಲಿ ಬೆಳಕಿನ ಪ್ರಖರತೆಗಳನ್ನು ಲೆಕ್ಕ ಹಾಕಬಹುದು. ಮುಂಜಾನೆ ಸೂರ್ಯನ ಬೆಳಕಿನ ಪ್ರಖರತೆ ೩,೦೦೦ ft ಕ್ಯಾಂಡಲ್. ಕೆಲವು ಬೆಳೆಗಳಿಗೆ ಅಷ್ಟು ಬಿಸಿಲು ಕೂಡ ಸಹನೆಯಾಗುವುದಿಲ್ಲ. ವೆನಿಲಾ ಬೆಳೆಗೆ ೮೦೦ ft ಕ್ಯಾಂಡಲ್ ಬೇಕು. ಹಸಿಮೆಣಸಿನಕಾಯಿ ಗಿಡಕ್ಕೆ ೧,೮೦೦ ft ಕ್ಯಾಂಡಲ್ ಬೇಕು. ಹಸಿಮೆಣಸಿನಕಾಯಿ ಗಿಡಗಳನ್ನು ಬಟ್ಟಬಯಲುಗಳಲ್ಲಿ ಬೆಳೆಯುವುದಿಲ್ಲ. ಬೆಳೆದರೂ ಫೋಟೋಸಿಂಥೆಸಿಸ್ ಕ್ರಿಯೆ ಸರಾಗವಾಗಿ ಜರುಗದೆ ಆಹಾರ ತಯಾರಿಸಿಕೊಳ್ಳುವುದಿಲ್ಲ. ಹೀಗಾಗಿ ಅವುಗಳ ಬೆಳವಣಿಗೆ, ಇಳುವರಿ ಕುಂಠಿತಗೊಳ್ಳುತ್ತವೆ.

ಭತ್ತ, ಗೋಧಿ, ರಾಗಿ, ಸಜ್ಜೆ, ನವಣೆ, ಜೋಳ, ಕಬ್ಬು ಇತ್ಯಾದಿ ಹುಲ್ಲು ಜಾತಿಯ ಸಸ್ಯಗಳಲ್ಲಿ ಸೂರ್ಯನ ಪೂರ್ಣ ಮಟ್ಟದ ಪ್ರಖರತೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಅಡಗಿದೆ. ಹೀಗಾಗಿ ಬಿಸಿಲು ಸಹನೆ ಮಾಡಿಕೊಳ್ಳುವ ಬೆಳೆಗಳ ಆಸರೆಯಲ್ಲಿ ಹೆಚ್ಚು ಬಿಸಿಲು ಬೇಡದ ಬೆಳೆಗಳನ್ನು ಆಯೋಜಿಸಬೇಕು. ಆಗ ಮಾತ್ರ ಆ ಬೆಳೆಗಳಿಂದ ಗರಿಷ್ಠ ಮಟ್ಟದ ಇಳುವರಿ ಮತ್ತು ಇತರ ಪ್ರಯೋಜನಗಳನ್ನು ಪಡೆಯುವುದು ಸಾಧ್ಯ. ಉದಾಹರಣೆಗೆ ಬಾಳೆಗೆ ೩೭೦೦ ರಿಂದ ೪೫೦೦ ಜಿಣ ಕ್ಯಾಂಡಲ್‌ವರೆಗಿನ ಪ್ರಖರತೆ ಸಾಕು. ನೀವು ಬಾಳೆಗೆ ನುಗ್ಗೆಯ ಆಸರೆ ಕಲ್ಪಿಸದೆ ಹೋದರೆ- ಅಥವಾ ಬಾಳೆಯನ್ನೇ ಬೆಳೆದರೆ- ಆ ಬಾಳೆ ನಿರ್ದಿಷ್ಟಪಡಿಸಿದ ಬೆಳಕಿನಲ್ಲಿ ಮಾತ್ರ ಆಹಾರ ತಯಾರಿಸುತ್ತದೆ. (ಉಳಿದಂತೆ ಅದು ನಿಷ್ಕ್ರಿಯವಾಗುತ್ತದೆ) ಹಾಗೆ ಅದು ತಯಾರಿಸಿದ ಆಹಾರ ಪ್ರಮಾಣದ ಮೇಲೆ ಭವಿಷ್ಯದ ಗೊನೆಯ ತೂಕ ನಿಗದಿಯಾಗುತ್ತದೆ. ಅಸಮತೋಲನ ಬೆಳಕಿನ ನಿರ್ವಹಣೆಯಿಂದಾಗಿ ಗಿಡ ದುರ್ಬಲವಾಗುತ್ತದೆ. ಯಾವಾಗ ಗಿಡ ದುರ್ಬಲವಾಗುತ್ತದೋ ಆಗ ಕೀಟಗಳು ದಾಳಿ ಇಡುತ್ತವೆ, ರೋಗಗಳು ಗಿಡದ ಬಾಳಿಗೆ ಮುಳುವಾಗುತ್ತವೆ. ಸಮತೋಲನದ ಬೆಳಕಿನ ನಿರ್ವಹಣೆ ಇದ್ದಾಗ ಬೆಳೆಗಳು ನಿಗದಿಪಡಿಸಿದ ಮಟ್ಟದಲ್ಲಿ ಆಹಾರ ಸಿದ್ಧಪಡಿಸಿಕೊಳ್ಳುತ್ತವೆ, ರೋಗನಿರೋಧಕ ಶಕ್ತಿಯನ್ನೂ ಬೆಳೆಸಿಕೊಳ್ಳುತ್ತವೆ, ಅಧಿಕ ಇಳುವರಿಯನ್ನೂ ದಯಪಾಲಿಸುತ್ತವೆ.

ಹುಲ್ಲು ಜಾತಿಯ ಸಸ್ಯಗಳನ್ನು ಹೊರತುಪಡಿಸಿ, ಉಳಿದ ಕೆಲ ಸಸ್ಯ/ಫಸಲುಗಳ ಬೆಳಕಿನ ಸಹನಾ ಮಟ್ಟ ಇಂತಿದೆ:

ಶುಂಠಿ, ಅರಿಶಿಣ, ಮೆಣಸಿನಕಾಯಿ, ಟೊಮ್ಯಾಟೊ, ಕಾಳುಮೆಣಸು- ೧,೮೦೦ ft ಕ್ಯಾಂಡಲ್, ತೆಂಗು- ೫,೪೦೦ ft ಕ್ಯಾಂಡಲ್, ಅಡಿಕೆ- ೨೮೦೦ ft ಕ್ಯಾಂಡಲ್, ದ್ರಾಕ್ಷಿ- ೨,೭೦೦ರಿಂದ ೩,೭೦೦ ft ಕ್ಯಾಂಡಲ್, ಉಪ್ಪು ನೇರಳೆ (ಮಲ್ಪರಿ)- ೪,೭೦೦ ft ಕ್ಯಾಂಡಲ್.

ಇದು ಆಯಾಯ ಗಿಡದ ಬೆಳಕಿನ ಸಹನಾಶಕ್ತಿ. ಯಾವುದೇ ಗಿಡಗಳು ಬಿದ್ದ ಸೂರ್ಯ ಕಿರಣಗಳನ್ನು ಪೂರ್ತಿ ಬಳಸಿಕೊಳ್ಳುವುದಿಲ್ಲ. ಪ್ರತಿ ಚದರಡಿ ಬಿಸಿಲಿಗೆ ೧,೨೫೦ ಕಿಲೋ ಕ್ಯಾಲರಿ ಶಕ್ತಿ ಇದೆ. ಯಾವುದೇ ಗಿಡದ ಒಂದು ಚದರಡಿ ಹಸಿರೆಲೆ ೧೨.೫ ಕಿಲೋ ಕ್ಯಾಲರಿ ಶಕ್ತಿಯನ್ನು ಮಾತ್ರ ಪಡೆದುಕೊಳ್ಳುತ್ತದೆ. ಮತ್ತು ಅದರ ಸಹಾಯದಿಂದ ೪.೫ ಗ್ರಾಂ ಕಾರ್ಬೋಹೈಡ್ರೇಡ್ ತಯಾರಿಸುತ್ತದೆ. ಸೂರ್ಯಾಸ್ತದ ತರುವಾಯ ಗಿಡದ ಎಲ್ಲ ಭಾಗಗಳಿಗೂ ಈ ಆಹಾರ ಸರಬರಾಜಾಗುತ್ತದೆ. ಈ ಆಹಾರದ ಪೈಕಿ ಧಾನ್ಯದ ಬೆಳೆಗಳಾದರೆ ಅದರ ಇಳುವರಿಗಾಗಿ ೧.೫ ಗ್ರಾಂ, ಗೆಡ್ಡೆ, ಗೆಣಸು, ಕಬ್ಬು, ಬಾಳೆಗಳ ಬೆಳೆಗಳಾದರೆ ಅವುಗಳ ಇಳುವರಿಗಾಗಿ ೧೨.೨೫ ಗ್ರಾಂ ಆಹಾರ ವಿನಿಯೋಗಿಸಲ್ಪಡುತ್ತದೆ. ಇದು ನಿಸರ್ಗ ನಿಶ್ಚಿತ ನಿಯಮ.

ಇನ್ನೂ ಕೆಲ ನಿಯಮಗಳಿವೆ. ಉದಾಹರಣೆಗೆ ಒಂದು ಗಿಡ ದಿನಕ್ಕೆ ೧೦೦ ಕೆ.ಜಿ. ಕಾರ್ಬೋಹೈಡ್ರೇಡ್ ತಯಾರು ಮಾಡಿದರೆ, ಅದರಲ್ಲಿ ಶೇಕಡ ೪೦ರಷ್ಟನ್ನು ನಾಳಿನ ಧಾನ್ಯಗಳ ನಿರ್ಮಾಣಕ್ಕಾಗಿ ಕಳುಹಿಸುತ್ತದೆ. ಶೇಕಡ ೨೦ರಷ್ಟನ್ನು ಗಿಡದ ಬೆಳವಣಿಗೆಗಾಗಿ, ಶೇಕಡ ೨೦ರಷ್ಟನ್ನು ಬೇರುಗಳ ಅಭಿವೃದ್ಧಿಗಾಗಿ, ಉಳಿದ ಶೇಕಡ ೨೦ರಷ್ಟನ್ನು ಸ್ವಾದ, ಸುಗಂಧ, ಪೌಷ್ಟಿಕತೆ, ಪ್ರತಿರೋಧಶಕ್ತಿ ಮತ್ತು ಸಂಗ್ರಹಣ ಗುಣದೆಡೆಗೆ ರವಾನಿಸುತ್ತದೆ. ಹೈಬ್ರೀಡ್ ಅಲ್ಲದ ಎಲ್ಲ ಬೀಜಗಳಲ್ಲೂ ಈ ಶಕ್ತಿ ಅಡಗಿದೆ. ಆದರೆ ನಮ್ಮ ಹಸಿರುಕ್ರಾಂತಿ ಈ ನಿಯಮವನ್ನು ಅದಲುಬದಲು ಮಾಡಿತು. ನಮ್ಮ ವಿಜ್ಞಾನಿಗಳು; ಗಿಡದ ಬೆಳವಣಿಗೆಗೆ, ಬೇರಿನ ಬೆಳವಣಿಗೆಗೆ, ಸ್ವಾದ, ಸುಗಂಧ, ಪೌಷ್ಟಿಕತೆ, ಪ್ರತಿರೋಧಶಕ್ತಿ, ಮತ್ತು ಸಂಗ್ರಹಣಾಶಕ್ತಿಗಾಗಿ ಮೀಸಲಾಗಿದ್ದ ತಲಾ ಶೇಕಡ ೨೦ರಷ್ಟರಲ್ಲಿ ತಲಾ ಶೇಕಡ ೧೦ರಷ್ಟನ್ನು ಧಾನ್ಯ ನಿರ್ಮಾಣದೆಡೆಗೆ ವರ್ಗಾಯಿಸಿದರ. ಹೀಗಾಗಿ ಶೇಕಡ ೪೦ರಷ್ಟಿದ್ದ ಧಾನ್ಯ ನಿರ್ಮಾಣದ ಶಕ್ತಿ ಶೇಕಡ ೭೦ಕ್ಕೆ ಏರಿತು. ಇದರಿಂದ ಆಗಿರುವ ಅನಾಹುತ ಇವತ್ತು ಅರಿವಾಗುತ್ತಿದೆ. ನಮ್ಮ ಬಾಸ್ಮತಿ ಭತ್ತ ಏಳು ಅಡಿ ಅಡಿ ಎತ್ತರಕ್ಕೆ ಬೆಳೆಯುತ್ತಿತ್ತು. ಈಗ ಅದು ಜಯ, ಪದ್ಮ ಭತ್ತಗಳ ತರ ಗಿಡ್ಡ ಆಗಿದೆ. ಹುಲ್ಲಿನ ಇಳುವರಿಯೂ ಕಮ್ಮಿ ಆಗಿದೆ. ನಮ್ಮ ಜೋಳ ಹದಿನೆಂಟು ಅಡಿ ಎತ್ತರಕ್ಕೆ ಬೆಳೆಯುತ್ತಿತ್ತು. ಅಷ್ಟು ಎತ್ತರ ಬೆಳೆಯುವ ಜೋಳವನ್ನು ಈಗಿನ ತಲೆಮಾರಿನವರು ನೋಡಿಯೇ ಇಲ್ಲ. ಈಗ ಆ ಜೋಳ ಐದು ಅಡಿಗೆ ಕುಗ್ಗಿದೆ. ಆಗ ಬೇರಿನ ಬೆಳವಣಿಗೆಗಾಗಿಯೇ ೨೦% ಆಹಾರ ವಿನಿಯೋಗವಾಗುತ್ತಿತ್ತು. ಆಗ  ಜೋಳದ ಬೇರುಗಳು ವಿಸ್ತರಿಸಿ ಬೆಳೆಯುತ್ತಿದ್ದವು, ಆಳಕ್ಕೆ ಇಳಿಯುತ್ತಿದ್ದವು. ಬರಗಾಲ, ಅಕಾಲ ಮಳೆಗಳನ್ನು ಬೆಳೆಗಳು ತಡೆದು ಕೊಳ್ಳುತ್ತಿದ್ದವು. ಈಗ ಬೇರುಗಳು ಗಿಡ್ಡವಾಗಿವೆ. ಕಾಲಕಾಲಕ್ಕೆ ಮಳೆ ಬಂದರೆ, ಡ್ಯಾಮಿನಲ್ಲಿ ನೀರಿದ್ದರೆ ಮಾತ್ರ ಅವು ಬೆಳೆಯುತ್ತವೆ. ಇಲ್ಲದಿದ್ದರೆ ಇಲ್ಲ. ಧಾನ್ಯಗಳ ಸ್ವಾದ, ಸುಗಂಧ, ಪೌಷ್ಟಿಕತೆ, ಪ್ರತಿರೋಧಶಕ್ತಿ ಮತ್ತು ದೀರ್ಘಕಾಲದ ಬಾಳಿಕೆಯ ಶಕ್ತಿಗಳ ವಿಷಯದಲ್ಲೂ ಹೀಗೇ ಆಯಿತು. ಇವತ್ತಿನ ಅಧಿಕ ಇಳುವರಿಯ ಯಾವುದೇ ಫಲದಲ್ಲೂ ಸ್ವಾದ, ಸುಗಂಧ, ಪೌಷ್ಟಿಕತೆಗಳಿಲ್ಲ. ಜೊತೆಗೆ ಅಧಿಕ ಇಳುವರಿಯೂ ಇಲ್ಲ. ಹಿಂದೆ ಎಕರೆಗೆ ೮೦ ಟನ್ ಇಳುವರಿ ನೀಡುವ ದೇಸಿ ತಳಿಯ ಕಬ್ಬುಗಳಿದ್ದವು. ಕೃಷಿ ವಿಶ್ವವಿದ್ಯಾಲಯಗಳು ಅಧಿಕ ಇಳುವರಿಯ ೩೨ ಹೊಸ ತಳಿಗಳನ್ನು ಪರಿಚಯಿಸಿರುವುದಾಗಿ ಹೇಳಿಕೊಳ್ಳುತ್ತಿವೆ. ೧೮ ವರ್ಷಗಳ ಹಿಂದೆ ನಮ್ಮ ದೇಸಿ ತಳಿಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ೪೧೯ ತಳಿಯ ಕತೆ ಏನಾಯಿತು? ಇವತ್ತು ಅದರ ಇಳುವರಿ ಹತ್ತು ಟನ್‌ಗೆ ಬಂದು ನಿಂತಿದೆ. ಕೊಯಮತ್ತೂರು ೮೬೦೩೨ ತಳಿ ಬಂತು. ಎಕರೆಗೆ ೮೦ ಟನ್ ಇಳುವರಿ ಅಂದ್ರು. ಈಗ ೧೫ ಟನ್‌ಗೆ ಬಂದು ನಿಂತಿದೆ. ಕಬ್ಬಿನ ಇಳುವರಿ ಕಮ್ಮಿ ಆದ ಹಾಗೆಲ್ಲ ಗೊಬ್ಬರದ ಮೂಟೆಗಳ ಸಂಖ್ಯೆ ಹೆಚ್ಚಾಗಿದೆ. ನಿಸರ್ಗ ಅಸ್ವಾಭಾವಿಕವಾದ ಯಾವುದನ್ನೂ ಒಪ್ಪುವುದಿಲ್ಲ. ತಳಿಯಿಂದ ಇಳುವರಿ ಹೆಚ್ಚಾಗುವುದಿಲ್ಲ ಅನ್ನುವುದು ಈಗ ಸಾಭೀತಾಗಿದೆ.

ಸ್ವಾದ, ಸುಗಂಧ, ಪೌಷ್ಟಿಕತೆ ಮತ್ತು ಪ್ರತಿರೋಧಕ ಶಕ್ತಿಗಳಿರದ ಧಾನ್ಯಗಳಿಂದಾಗಿ ಇವತ್ತು ಏನಾಗಿದೆ? ಗ್ರೀನ್ ರೆವಲ್ಯೂಷನ್‌ನಿಂದ ಸಮೃದ್ಧಿ ಬರಲಿಲ್ಲ. ಬದಲಿಗೆ ರೋಗಗಳು ಬಂದವು, ಭಾರತ ರೋಗಗ್ರಸ್ತ ದೇಶವಾಯಿತು. ಬಿ.ಪಿ., ಡಯಾಬಿಟೀಸ್, ಕ್ಯಾನ್ಸರ್, ಏಡ್ಸ್ ಇವೆಲ್ಲವೂ ನಿಸ್ಸಾರ ಆಹಾರದ ಫಲಶೃತಿ. ಏಡ್ಸ್-ಪ್ರತಿರೋಧಕಶಕ್ತಿ ಇಲ್ಲದವರಿಗೆ ಬರುವ ಖಾಯಿಲೆ. ನೈಸರ್ಗಿಕ ಕೃಷಿ ಇಂಥ ಕಾಯಿಲೆಗಳನ್ನೆಲ್ಲ ನಿರ್ನಾಮ ಮಾಡುತ್ತದೆ. ರೋಗಗಳಿರದ, ಅಭಾವಗಳಿರದ, ಸಮೃದ್ಧ ದೇಶವನ್ನು ನಿರ್ಮಾಣ ಮಾಡುತ್ತದೆ.

ನಾವೀಗ ನೈಸರ್ಗಿಕ ಕೃಷಿಯನ್ನು ಕೆಲವು ಮುಖ್ಯ ಬೆಳೆಗಳಿಗೆ ಅನ್ವಯಿಸಿ ನೋಡೋಣ.

ಪುಸ್ತಕ:
ಲೇಖಕರು:
ಪ್ರಕಾಶಕರು:

ನಿಮ್ಮ ಪ್ರತಿಕ್ರಿಯೆ, ಸಲಹೆ ನೀಡಿ

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ಇತರ