ಅಪರೂಪದ ಅ‘ತಿಥಿ’

ಚಿತ್ರ: 
ತಿಥಿ
ತಾರಾಗಣ: 
ಸಿಂಗ್ರಿಗೌಡ, ಎಸ್‌.ಎಂ. ಪೂಜಾ, ತಮ್ಮೇಗೌಡ, ಎಚ್.ಎನ್. ಅಭಿಷೇಕ್
ನಿರ್ದೇಶನ: 
ರಾಮ್ ರೆಡ್ಡಿ
ನಿರ್ಮಾಪಕರು: 
ಪ್ರತಾಪ್ ರೆಡ್ಡಿ

ಪ್ರೇಕ್ಷಕರನ್ನು ಆತಿಥೇಯರು ಹಾಗೂ ಚಲನಚಿತ್ರಗಳನ್ನು ಅತಿಥಿಗಳು ಎಂದು ಭಾವಿಸುವುದಾದರೆ ‘ತಿಥಿ’ ಅಪರೂಪದ ಹಾಗೂ ಸ್ವಾಗತಾರ್ಹ ಅತಿಥಿ. ಪ್ರತಿಷ್ಠಿತ ‘ಲೊಕಾರ್ನೊ ಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆಯುವ ಮೂಲಕ ವಿಶ್ವದ ಗಮನಸೆಳೆದ ‘ತಿಥಿ’, ತನ್ನ ಪ್ರಫುಲ್ಲತೆ ಹಾಗೂ ತಾಜಾ ನಿರೂಪಣೆಯಿಂದ ಗಮನಸೆಳೆಯುತ್ತದೆ.

ತರುಣನೊಬ್ಬ ತನ್ನ ಯಾವುದೋ ಸೃಜನಶೀಲ ಚಟುವಟಿಕೆಯಿಂದ ಸಾಂಪ್ರದಾಯಿಕ ಚೌಕಟ್ಟನ್ನು ಮೀರುವ ಮೂಲಕ ಮನೆಯ ಹಿರಿಯರನ್ನೆಲ್ಲ ಬೆರಗುಗೊಳಿಸುವಂತೆ, ಸಿದ್ಧಸೂತ್ರಗಳ ಸುಳಿಯಲ್ಲಿ ಸಿಲುಕಿದ ಸಮಕಾಲೀನ ಕನ್ನಡ ಚಿತ್ರರಂಗವನ್ನು ‘ತಿಥಿ’ ದಂಗುಬಡಿಸುವಂತಿದೆ.

ರಾಮ್‌ ರೆಡ್ಡಿ ನಿರ್ದೇಶನದ ‘ತಿಥಿ’ ಮುಖ್ಯವೆನ್ನಿಸುವುದು ಎರಡು ಕಾರಣಗಳಿಗಾಗಿ. ಚೊಚ್ಚಿಲ ಸಿನಿಮಾದಲ್ಲೇ ತನ್ನದೇ ಆದ ಶೈಲಿಯೊಂದನ್ನು ಕಂಡುಕೊಂಡಿರುವ ನಿರ್ದೇಶಕರ ಈ ಚಿತ್ರವನ್ನು ಕನ್ನಡದ ಈವರೆಗಿನ ಯಾವ ಸಿನಿಮಾದೊಂದಿಗೂ ಹೋಲಿಸುವುದು ಕಷ್ಟ ಎನ್ನುವುದು ಅದರ ಮೊದಲ ಅಗ್ಗಳಿಕೆ. ಒಂದು ನೆಲದ ಬದುಕನ್ನು ಅಲ್ಲಿಂದ ಲೀಲಾಜಾಲವಾಗಿ ಎತ್ತಿಕೊಂಡು ನೇರ ತೆರೆಗೆ ತಂದಂತೆ ಕಾಣಿಸುವುದು ಸಿನಿಮಾದ ಮತ್ತೊಂದು ವಿಶೇಷ. ವೃತ್ತಿಪರ ನಟರಲ್ಲದವರನ್ನು ಬಳಸಿಕೊಂಡು ‘ರಿಯಲಿಸ್ಟಿಕ್‌ ಸಿನಿಮಾ’ ಮಾಡುವ ನಿರ್ದೇಶಕರ ಪ್ರಯತ್ನ ಗಮನಸೆಳೆಯುತ್ತದೆ.
ನಮ್ಮಲ್ಲಿ ಬಹುತೇಕ ಪ್ರಯೋಗಶೀಲ ಅಥವಾ ಕಲಾತ್ಮಕ ಸಿನಿಮಾಗಳು ಸಮಸ್ಯೆಯೊಂದನ್ನು ಸಿಗಿದುನೋಡುವ ಪ್ರಯತ್ನಗಳಾಗಿರುತ್ತವೆ. ಆದರೆ, ‘ತಿಥಿ’ಯಲ್ಲಿ ಹೀಗೆ ಬಗೆದುನೋಡುವ ಕಸರತ್ತು ಇಲ್ಲದಿರುವುದರಿಂದ, ಇದೊಂದು ಉಲ್ಲಾಸಕರ ಅನುಭವವಾಗಿ ಪ್ರೇಕ್ಷಕನಿಗೆ ಆಪ್ತವೆನ್ನಿಸುತ್ತದೆ.

ಮಂಡ್ಯ ಜಿಲ್ಲೆಯ ನೊದೇನಕೊಪ್ಪಲು ಎನ್ನುವ ಊರಿನ ಸೆಂಚುರಿ ಗೌಡ ಎನ್ನುವ ನೂರಾಒಂದು ವರ್ಷದ ಹಿರೀಕನ ಸಾವಿನೊಂದಿಗೆ ಆರಂಭವಾಗುವ ಸಿನಿಮಾ, ಆತನ ಅಪರಕರ್ಮಗಳ ಹನ್ನೊಂದು ದಿನಗಳ ಆಚರಣೆಯೊಂದಿಗೆ ಮುಗಿಯುತ್ತದೆ.

ಈ ಹನ್ನೊಂದು ದಿನಗಳಲ್ಲಿ ಸಾವಿನ ಮನೆಯಲ್ಲಿ ನಡೆಯುವ ಪ್ರಸಂಗಗಳು ಚಿತ್ರದ ಕಥೆ. ಸೆಂಚುರಿ ಗೌಡನ ಮಗ ಗಡ್ಡಪ್ಪ ಲೌಕಿಕದ ಜಂಜಡಗಳನ್ನು ಹಚ್ಚಿಕೊಳ್ಳದ ಜಂಗಮ ವ್ಯಕ್ತಿತ್ವದವನು. ಅವನ ಮಗ ತಮ್ಮಣ್ಣ ಅಪ್ಪಟ ಲೌಕಿಕ ಮನುಷ್ಯ. ಮುಂದೆ ಒದಗಬಹುದಾದ ವ್ಯಾಜ್ಯಗಳ ಊಹೆಯಲ್ಲಿ ಆಸ್ತಿಯನ್ನು ಬೇಗನೆ ಪರಭಾರೆ ಮಾಡಿ ದುಡ್ಡು ಮಾಡಿಕೊಳ್ಳುವ ಆಸೆ ಆತನದು. ಈ ತಮ್ಮಣ್ಣನಿಗೆ ಅಭಿ ಎನ್ನುವ ಮಗನಿದ್ದಾನೆ. ಮೀಸೆಕಪ್ಪು ಗಾಢವಾಗದ ಈ ಹುಡುಗ ವಯೋಸಹಜ ಪ್ರಣಯಪ್ರಸಂಗದಲ್ಲಿ ಸುಖಿಸುತ್ತಿದ್ದಾನೆ. ಹೀಗೆ, ಸೆಂಚುರಿಗೌಡನಿಂದ ಅಭಿಯವರೆಗೆ ಒಂದು ಕುಟುಂಬದ ನಾಲ್ಕು ತಲೆಮಾರುಗಳ ಪಲ್ಲಟಗಳನ್ನು ‘ತಿಥಿ’ಯ ನೆಪದಲ್ಲಿ ಕಟ್ಟಿಕೊಡುವ ನಿರ್ದೇಶಕರ ತಂತ್ರ ಸೊಗಸಾಗಿದೆ.

ಉತ್ತರ ಕರ್ನಾಟಕದಿಂದ ಕುರಿಮಂದೆಗಳನ್ನು ಮೇಯಿಸಿಕೊಂಡು ಬಂದ ಕುರಿಗಾಹಿಗಳ ಬದುಕಿನ ಚಿತ್ರಣ ಸಿನಿಮಾಕ್ಕೊಂದು ಕಾವ್ಯದ ಆವರಣವನ್ನು ಸೃಷ್ಟಿಸಿದೆ. ಕುರಿಗಳೊಂದಿಗೆ ಊರೂರು ಸುತ್ತುತ್ತ, ಬಯಲಿನಲ್ಲೇ ಬದುಕುವ ಕುರುಬರ ಬದುಕು ಅಲೆಮಾರಿ ಸ್ವಭಾವದ ಗಡ್ಡಪ್ಪನನ್ನು ಆಕರ್ಷಿಸುತ್ತದೆ. ಕುರುಬರ ಹುಡುಗಿ ಕಾವೇರಿ ಹಾಗೂ ಅಭಿ ಆಕರ್ಷಿತರಾಗುತ್ತಾರೆ.

ಕಥೆಯ ನೆಪದಲ್ಲಿ ರಾಮ್‌ ರೆಡ್ಡಿ ಅವರು ತೋರಿಸಿರುವ ನೊದೇನಕೊಪ್ಪಲು ಗ್ರಾಮೀಣ ಭಾರತದ ಯಾವುದೇ ಹಳ್ಳಿಯನ್ನು ಹೋಲುವಂತಿದೆ. ನದಿ ನೀರಿಗೆ ಮೋಟರ್‌ ಜೋಡಿಸುವ ರೈತರು, ನದಿಯಿಂದ ಮರಳು ಎತ್ತುವ ತರುಣರು, ಗೆಳೆಯನ ಕಷ್ಟಕ್ಕಾಗಿ ಕಳ್ಳರಾಗುವ ಹುಡುಗರು, ಕೃಷಿಭೂಮಿ ಮಾರಿ ಸ್ಥಿತಿವಂತರಾಗುವ ಕನಸುಗಳು, ಇಸ್ಪೀಟ್‌ ಆಟ, ಮನೆಮಂದಿಯನ್ನೆಲ್ಲ ಆವರಿಸಿಕೊಂಡಿರುವ ಕಿರುತೆರೆ, ಬಾಡೂಟದ ಸಂಭ್ರಮ– ಹೀಗೆ, ಹಲವು ದೃಶ್ಯಗಳು ‘ತಿಥಿ’ ಚಿತ್ರವನ್ನು ಹೆಚ್ಚುಹೆಚ್ಚು ಸಮಕಾಲೀನಗೊಳಿಸಿವೆ. ಇದರ ಜೊತೆಗೆ ಕಥೆ ಘಟಿಸುವ ಸ್ಥಳದ ಶಬ್ದಗಳನ್ನೇ ಹಿನ್ನೆಲೆಯಲ್ಲಿ ಬಳಸಿಕೊಂಡಿರುವುದು (ಧ್ವನಿ ವಿನ್ಯಾಸ: ನಿತಿನ್ ಲುಕೋಸ್) ಕೂಡ ಸಿನಿಮಾದ ರಿಯಾಲಿಟಿಯನ್ನು ಹೆಚ್ಚಿಸಿದೆ. 

ಕನ್ನಡದ ‘ತಿಥಿ’ಯ ಸೊಗಡಿನ ಹಿಂದೆ ಚಿತ್ರಕ್ಕೆ ಕಥೆ ಒದಗಿಸಿರುವ ಈರೇಗೌಡ ಅವರದು ಪ್ರಮುಖ ಪಾತ್ರ. ಚಿತ್ರಕ್ಕೊಂದು ಪ್ರಾದೇಶಿಕ ಆವರಣವನ್ನು ಈರೇಗೌಡರು ಸೃಷ್ಟಿಸಿದ್ದರೆ, ನಿರ್ದೇಶಕ ರಾಮ್‌ ರೆಡ್ಡಿ ಜಾಗತಿಕ ಆವರಣವೊಂದನ್ನು ‘ತಿಥಿ’ಗೆ ಕಲ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿದೇಶಿ ಗೆಳೆಯರ ಪಾತ್ರವೂ ಇದೆ. ರಾಮ್‌ ರೆಡ್ಡಿ ಅವರು ಸಿನಿಮಾ ವ್ಯಾಕರಣ ಕಲಿತ ‘ಪ್ರಾಗ್ ಫಿಲ್ಮ್ ಇನ್‌ಸ್ಟಿಟ್ಯೂಟ್’ನಲ್ಲಿ ಅವರ ಸಹಪಾಠಿಗಳಾಗಿದ್ದ ಹಾಲೆಂಡ್‌ನ ಡೊರಾನ್‌ ಟೆಂಪರ್ಟ್‌ ‘ತಿಥಿ’ ಚಿತ್ರದ ಛಾಯಾಗ್ರಾಹಕರು ಹಾಗೂ ರಾಮ್‌ ರೆಡ್ಡಿ ಅವರೊಂದಿಗೆ ಅಮೆರಿಕದ ಜಾನ್‌ ಜಿಮ್ಮೆರ್‌ಮನ್‌ ಸಂಕಲನಕಾರರಾಗಿ ದುಡಿದಿದ್ದಾರೆ.

‘ತಿಥಿ’ ಚಿತ್ರದ ಚೆಲುವು ಹೆಚ್ಚುವಲ್ಲಿ ಸಹಜ ಪಾತ್ರಧಾರಿಗಳ ಅಭಿನಯ ಮುಖ್ಯವಾದುದು. ಸಿಂಗ್ರಿಗೌಡ (ಸೆಂಚುರಿ ಗೌಡ), ಎಸ್‌.ಎಂ. ಪೂಜಾ (ಕಾವೇರಿ), ತಮ್ಮೇಗೌಡ (ತಮ್ಮಣ್ಣ), ಎಚ್.ಎನ್. ಅಭಿಷೇಕ್ (ಅಭಿ)– ನಾಟಕೀಯತೆಯಿಂದ ಹೊರತಾದ ಇವರೆಲ್ಲ ನಿಜ ಬದುಕಿನ ಪಾತ್ರಗಳಾಗಿ ಇಷ್ಟವಾಗುತ್ತಾರೆ. ಪಾತ್ರಧಾರಿಗಳ ಪೈಕಿ ಹೆಚ್ಚು ಆಪ್ತವೆನ್ನಿಸುವುದು ಗಡ್ಡಪ್ಪನ ಪಾತ್ರಧಾರಿ ಚನ್ನೇಗೌಡ. ನಿಂತಲ್ಲಿ ನಿಲಲರಿಯದ, ಅಪ್ಪನ ಸಾವನ್ನೂ ನಿರ್ವಿಕಾರವಾಗಿ ಸ್ವೀಕರಿಸುವ, ಕುರಿಗಾಹಿಗಳ ಜೊತೆ ಬಯಲಿನಲ್ಲಿ ಸುಖ ಕಾಣುವ ಗಡ್ಡಪ್ಪನದು ಕನ್ನಡ ಚಿತ್ರರಂಗ ರೂಪಿಸಿರುವ ಸಶಕ್ತ ಪಾತ್ರಗಳಲ್ಲೊಂದು.
ಈ ಪಾತ್ರವನ್ನು ತನ್ನ ಹೊರತಾಗಿ ಬೇರ್‍ಯಾರೂ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವಷ್ಟರಮಟ್ಟಿಗೆ ಚನ್ನೇಗೌಡ ಪೋಷಿಸಿದ್ದಾರೆ. ತನ್ನ ಬದುಕಿನ ದುರಂತವನ್ನು ನಿನ್ನೆ ರಾತ್ರಿ ಕಂಡ ಕನಸು ಎನ್ನುವಂತೆ ಗಡ್ಡಪ್ಪ ಹೇಳುವ ದೃಶ್ಯ ವಿಶಿಷ್ಟವಾಗಿದೆ.

ಸಾವಿನ ಸಮ್ಮುಖದಲ್ಲಿ ಬದುಕಿನ ಕಟು ವಾಸ್ತವಗಳನ್ನು ಪರಿಶೀಲಿಸುವ ಕಥನಗಳು ಕನ್ನಡ ಚಿತ್ರರಂಗಕ್ಕೆ ಹೊಸತಲ್ಲ. ‘ತಿಥಿ’ ಜನಪ್ರಿಯತೆಗೆ ಕಾರಣವಾದ ‘ಲೊಕಾರ್ನೊ ಚಿತ್ರೋತ್ಸವ’ದಲ್ಲಿ ಐವತ್ತು ವರ್ಷಗಳ ಹಿಂದೆ ಗೌರವಕ್ಕೆ ಪಾತ್ರವಾಗಿದ್ದ ‘ಸಂಸ್ಕಾರ’ ಕೂಡ ಸೂತಕದ ಕಥೆಯನ್ನೇ ಹೊಂದಿದೆ. ಆದರೆ, ‘ತಿಥಿ’ ಚಿತ್ರದಲ್ಲಿ ಸೂತಕ ಎನ್ನುವುದು ಇದೆಯೋ ಇಲ್ಲವೋ ಎನ್ನುವಷ್ಟು ತೆಳುವಾಗಿದೆ.
 
ಇದು ಸಿನಿಮಾದ ಕೊರತೆ ಕೂಡ. ಪರಿಸರ, ಪಾತ್ರಗಳು, ಧ್ವನಿಯ ಸಹಜತೆಗಾಗಿ ಹಂಬಲಿಸಿರುವ ಚಿತ್ರತಂಡ ಹಳ್ಳಿಯ ಹೊರ ಆವರಣವೊಂದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಆದರೆ, ಗ್ರಾಮೀಣ ಬದುಕಿನ ಆಂತರಿಕ ತಾಕಲಾಟಗಳು ಸಿನಿಮಾದಿಂದ ದೂರವೇ ಉಳಿದಿವೆ. ನೂರು ವರ್ಷ ಬಾಳಿದ ಹಿರೀಕನ ಸಾವು ಚಿತ್ರದಲ್ಲಿ ಯಾರನ್ನೂ ಕುಟುಂಬದ ಸದಸ್ಯರನ್ನೂ ಕೊಂಚವೂ ವಿಚಲಿತಗೊಳಿಸುವುದಿಲ್ಲ.
ತಿಥಿಯ ಸಂದರ್ಭದಲ್ಲಿನ ಬಾಡೂಟ ಹಳ್ಳಿಗಳಲ್ಲಿ ಜನರನ್ನು ಸೆಳೆಯುತ್ತದೆ, ನಿಜ. ಆದರೆ, ತಿಥಿಯ ಸಂದರ್ಭದಲ್ಲಿ ಊಟದ ಹಿನ್ನೆಲೆಯಲ್ಲಿ ನಿರ್ಗಮಿಸಿದ ವ್ಯಕ್ತಿಯ ಬದುಕಿನ ನೆನಪುಗಳು – ಭಾವನೆಗಳು ಮುಖ್ಯವಾಗಿರುತ್ತವೆ. ‘ತಿಥಿ’ ಚಿತ್ರದಲ್ಲಿ ಮಾರಿಹಬ್ಬದ ಬಾಡೂಟಕ್ಕೆ ಬರುವ ನಂಟರಂತೆ ಊರಿನ ಜನ ಸಂಭ್ರಮಿಸುವುದು ಅಸಹಜವಾಗಿದೆ.

ಇದು ಈ ತಲೆಮಾರಿನ ಜೀವನಧರ್ಮದ ಸಂಕೇತವೂ ಆಗಿರಬಹುದು ಅಥವಾ ಇಡೀ ಚಿತ್ರವನ್ನು ಒಂದು ಬಗೆಯ ಆಹ್ಲಾದದಲ್ಲಿ ಮುಳುಗಿಸುವ ನಿರ್ದೇಶಕರ ಪ್ರಯತ್ನವೂ ಆಗಿರಬಹುದು.

‘ತಿಥಿ’ ಭಿನ್ನ ಚಿತ್ರವೆನ್ನುವುದರಲ್ಲಿ ಅನುಮಾನ ಇಲ್ಲವಾದರೂ, ಅದರ ಚಿತ್ರಕಥೆಯಲ್ಲಿ ಕೆಲವು ಅನುಕೂಲಸಿಂಧು ನಡೆಗಳು ಇರುವುದನ್ನು ಗುರ್ತಿಸಬೇಕು. ತಾತನ ತಿಥಿ ಮಾಡಲು ಹೊರಡುವ ಮೊಮ್ಮಗ, ಬದುಕಿರುವ ಅಪ್ಪನ ‘ಮರಣ ಪತ್ರ’ವನ್ನು ಪಡೆದು ಆಸ್ತಿಯನ್ನು ಮಾರಲು ಪ್ರಯತ್ನಿಸುವುದು ಹಾಗೂ ತಿಥಿಯ ಅಂತಿಮಘಟ್ಟದಲ್ಲಿ ಆಸ್ತಿ ಕೊಳ್ಳುವವರು ಬರುವುದು ಅಂಥ ಅನುಕೂಲ ಸೂತ್ರಗಳಲ್ಲೊಂದು. ಚಿತ್ರದ ಕೊನೆಯಲ್ಲಿನ ಅಭಿ–ಕಾವೇರಿ ಪ್ರಣಯ ಕೂಡ ‘ನವ್ಯ ಕಥೆ’ಗಳ ಪ್ರೇರಣೆಯಂತಿದ್ದು, ನೋಡುಗರನ್ನು ವಿಚಲಿತಗೊಳಿಸುವ ಪ್ರಯತ್ನದಂತೆ ಕಾಣಿಸುತ್ತದೆ.

ಕೆಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟರೂ ‘ತಿಥಿ’ ಇತ್ತೀಚಿನ ವರ್ಷಗಳ ಗಮನಾರ್ಹ ಚಿತ್ರಗಳಲ್ಲೊಂದು ಹಾಗೂ ಸಿನಿಮಾ ವ್ಯಾಕರಣವನ್ನು ಸಶಕ್ತವಾಗಿ ಬಳಸಿಕೊಂಡಿರುವ ಕಲಾಕೃತಿ. ರಾಮ್‌ ರೆಡ್ಡಿಯವರ ಮುಂದಿನ ಸಿನಿಮಾಗಳ ಬಗ್ಗೆ ಪ್ರೇಕ್ಷಕ ಹಂಬಲಿಸುವಂತೆ ಮಾಡುವುದು ‘ತಿಥಿ’ ಚಿತ್ರದ ಸಾರ್ಥಕತೆಯಾಗಿದೆ.