* ಸಹನಾ ವಿಜಯಕುಮಾರ್.  ಬೆಂಗಳೂರು

ಅರೆ, ಇದ್ಯಾವ ತುಳಸಿ? ಅಮೆರಿಕದ ಹಿತ್ತಲಲ್ಲಿ ಏಕೆ ಬೆಳೆಯಿತು? ಇಲ್ಲಿಂದ ಹೋದ ಭಾರತೀಯರು ಬೆಳೆಸಿದ್ದಾ ಎಂಬ ಪ್ರಶ್ನೆಗಳು ಮೂಡುತ್ತಿವೆಯಾ? ಸ್ವಲ್ಪ ತಡೆಯಿರಿ. ಈ ತುಳಸಿಯ ಬೇರು ಭಾರತದ್ದಲ್ಲ. ಇಲ್ಲಿಯ ಮಣ್ಣಿನ ಒಂದೇ ಒಂದು ಕಣವೂ ಅದಕ್ಕೆ ಅಂಟಿಕೊಂಡಿಲ್ಲ. ಆದರೆ ಇಲ್ಲಿಂದ ಬೀಸಿದ ಹಿಂದುತ್ವದ ಗಂಧ-ಗಾಳಿ ಆ ತುಳಸಿಯನ್ನು ಬೆಳೆಸಿದೆ. ಆ ಗಾಳಿಯ ಪಸೆಯನ್ನು ಹೀರಿಕೊಂಡೇ ಅದು ನಳನಳಿಸುತ್ತಿದೆ. ಇನ್ನು ಸಾಕು ಹೀಗೆ ಒಗಟಾಗಿ ಹೇಳಿದ್ದು ಎನ್ನುತ್ತೀರಾ? ಇದೋ ಕೇಳಿ, ಇಷ್ಟು ಹೊತ್ತೂ ಉಲ್ಲೇಖಿಸಿದ್ದು ನಮ್ಮೆಲರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ತುಳಸಿ ಗಿಡದ ಬಗ್ಗೆಯಲ್ಲ, ನಮಗೆ ಅಷ್ಟೇನೂ ಪರಿಚಿತಳಲ್ಲದ, ತುಳಸಿ ಗೆಬಾರ್ಡ್ ಎಂಬ ಅಮೆರಿಕದ ಹೆಣ್ಣು ಮಗಳ ಬಗ್ಗೆ!

Tulsi-Gabbard-380

ಇಂದು ಭಾರತದಲ್ಲಿ ಹಿಂದೂ ಎನ್ನುವುದೇ ಎಲ್ಲ ಸಮಸ್ಯೆಗಳಿಗೂ ಮೂಲವಾಗಿಬಿಟ್ಟಿದೆ. ಹಿಂದೂ ಎನ್ನುವುದಕ್ಕೇ ಹಿಂಜರಿಕೆ. ಅದರ ಜೊತೆಗೇ ಹುಟ್ಟಿದ ಅವಳಿಯೇನೋ ಎನ್ನುವಷ್ಟು, ‘ಸೆಕ್ಯುಲರ್’ ಪದದ ಬಳಕೆ. ನೀವೇನಾದರೂ ಅಪ್ಪಿತಪ್ಪಿ ಭಾರತವನ್ನು ಹಿಂದೂ ರಾಷ್ಟ್ರ ಎಂದುಬಿಟ್ಟಿರೋ, ಅಲ್ಲಿಗೆ ಮುಗಿಯಿತು ಕಥೆ. ನಿಮ್ಮನ್ನು ಕೆಕ್ಕರಿಸಿ ನೋಡಿ ಮಾತಿನ ಕತ್ತಿಯಲ್ಲೇ ಸಾವಿರ ಹೋಳಾಗಿ ಸೀಳಿ ಬಿಡುವ ಮಂದಿ. ಹಿಂದೂವಿಗೆ ಸಂಬಂಧಿಸಿದ ಎಲ್ಲವೂ ಸೆಕ್ಯುಲರ್ ನ್ಯಾಯಾಧೀಶರುಗಳ ಪರಾಮರ್ಶೆಗೆ ಹೋಗಲೇಬೇಕು. ಕಡೆಗೆ ಭಗವದ್ಗೀತೆಯ ಸಾರಾಮೃತಕ್ಕೂ ಕೋಮುವಾದದ ಒಗ್ಗರಣೆಯೇ ಗತಿ! ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡೋಣವೇ ಎಂದು ಕೇಳಿದರೆ, ‘ಬೇಡ, ಅದು ಹಿಂಸೆಯನ್ನು ಪ್ರಚೋದಿಸುತ್ತದೆ’ ಎನ್ನುತ್ತಿವೆ ಹಟ ಮೆತ್ತಿಕೊಂಡ ಮನಸ್ಸುಗಳು. ತುಂಬಾ ಓದಿಕೊಂಡ, ಬುದ್ಧಿವಂತರೆನಿಸಿಕೊಂಡ ಹಿಂದೂಗಳೇ ಮಗ್ಗುಲು ಬದಲಾಯಿಸಿದಷ್ಟು ಸಲೀಸಾಗಿ ಧರ್ಮವನ್ನು ಬದಲಾಯಿಸುತ್ತಿದ್ದಾರೆ! ‘ಏನಿದೆ ಈ ಧರ್ಮದಲ್ಲಿ? ಗೀತೆಯಲ್ಲಿ?’ ಎಂಬ ಅವರ ಪ್ರಶ್ನೆಗಳಿಗೆ ಉತ್ತರವಾಗಿ ನಿಂತಿದ್ದಾಳೆ ಈ ಹೆಣ್ಣುಮಗಳು ತುಳಸಿ!

ಕೇಳಿ, ಈಕೆ ಅಪ್ಪಟ ಅಮೆರಿಕನ್ನಳು. ಹುಟ್ಟಿದ್ದು ಅಮೆರಿಕನ್ ಸಮೋವಾ ಎಂಬ ದ್ವೀಪದಲ್ಲಿ. ಎರಡು ವರ್ಷದವಳಾಗಿದ್ದಾಗ, ಹವಾಯಿ ದ್ವೀಪ ಸಮೂಹಕ್ಕೆ ಕುಟುಂಬ ಸಮೇತ ವಲಸೆ ಹೋದರು ತಂದೆ ಮೈಕ್ ಗೆಬಾರ್ಡ್. ಅಂದಹಾಗೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ನೀಡುವುದರಲ್ಲಿ ಹವಾಯಿಯದ್ದು ಎತ್ತಿದ ಕೈ. ಗೆಬಾರ್ಡ್ ದಂಪತಿಯ ಐವರು ಮಕ್ಕಳಲ್ಲಿ ಈಕೆ ನಾಲ್ಕನೆಯವಳು. ತಂದೆ ತಾಯಿ ಮೂಲತಃ ಕ್ರೈಸ್ತರು. ಆದರೆ ತಂದೆಗೆ ಮಂತ್ರ ಪಠನೆ, ಧ್ಯಾನ ಹಾಗೂ ಕೀರ್ತನೆಗಳಲ್ಲಿ ಅತೀವ ಆಸಕ್ತಿ. ಅವರು ಕ್ರೈಸ್ತರಾಗಿಯೇ ಉಳಿದು ಅವುಗಳನ್ನು ಮುಂದುವರೆಸಿದರೆ, ತಾಯಿ ಹಿಂದೂ ಧರ್ಮದ ಅನುಯಾಯಿಯಾದರು. ಐದೂ ಮಕ್ಕಳ ಹೆಸರು ಕ್ರಮವಾಗಿ, ಭಕ್ತಿ, ಜೈ, ಆರ್ಯನ್, ತುಳಸಿ ಹಾಗೂ ವೃಂದಾವನ್! ಇವರ ತಾಯಿ ಭಗವದ್ಗೀತೆಯ ಸಾರವನ್ನು ತಾವೂ ಉಂಡಿದ್ದಲ್ಲದೆ ಮಕ್ಕಳಿಗೂ ಉಣಬಡಿಸಿದರು. ಅದನ್ನು ಎಲ್ಲರಿಗಿಂತ ಹೆಚ್ಚಾಗಿ ಆಸ್ವಾದಿಸಿದವಳು ತುಳಸಿ. ತಾನು ಇದೇ ಧರ್ಮದ ಮಾರ್ಗದಲ್ಲಿ ನಡೆಯುತ್ತೇನೆ ಎಂದು ನಿಶ್ಚಯಿಸಿದಾಗ ಇನ್ನೂ ಹದಿಹರೆಯ ಈಕೆಗೆ. ಹಿಂದೂವಾಗಿ, ವೈಷ್ಣವಳಾಗಿ, ವಿಷ್ಣುವಿನ ಅವತಾರಗಳ ಬಗ್ಗೆ ಅರಿತು, ರಾಮಾಯಣ ಮಹಾಭಾರತಗಳನ್ನೂ ಮನನ ಮಾಡಿಕೊಂಡಳು ಎನ್ನುವುದಷ್ಟೇ ಈಕೆಯ ಕಥೆಯಾಗಿದ್ದರೆ ಅದನ್ನು ಹೇಳುವ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ನಮ್ಮ ಮಕ್ಕಳು ಸ್ಪರ್ಧೆಗೋಸ್ಕರ ಭಗವದ್ಗೀತೆಯ ಶ್ಲೋಕಗಳನ್ನು ಕಲಿತು, ವ್ಯಾಸಂಗಕ್ಕೋಸ್ಕರ ಅವುಗಳನ್ನು ಮರೆತುಬಿಡುತ್ತಾರಲ್ಲ, ಆ ವಯಸ್ಸಿನಲ್ಲಿ ತುಳಸಿ ಅದನ್ನು ತನ್ನ ಬದುಕಿನ ತಳಹದಿಯನ್ನಾಗಿಸಿಕೊಂಡಳು. ನಂತರ ಅವಳು ಸಾಧಿಸಿದ್ದೇನು ಕಡಿಮೆಯೇ?

ಚಿಕ್ಕಂದಿನಿಂದಲೇ ತಂದೆಯ ವ್ಯಾಪಾರದಲ್ಲಿ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿಕೊಡುತ್ತಿದ್ದ ತುಳಸಿ ಸಮರ ಕಲೆಗಳಲ್ಲಿ ಪ್ರವೀಣೆಯಾದಳು. ವಿಚಾರಗಳ ಮಂಥನದಿಂದ ಮನಸ್ಸೆಷ್ಟು ಗಟ್ಟಿಯಾಗುತ್ತಿತ್ತೋ, ದೇಹವನ್ನೂ ಅಷ್ಟೇ ಗಟ್ಟಿಯಾಗಿಸಿಕೊಂಡಳು. ಜವಾಬ್ದಾರಿಗಳು, ಅಪಾಯಗಳೆಂದರೆ ಅದೇನೋ ಪ್ರೀತಿ. ಎಲ್ಲಕ್ಕಿಂತ ಹೆಚ್ಚಾಗಿ, ಸಮಾಜಕ್ಕೆ ಮಾಡಬೇಕಾದ ಕರ್ತವ್ಯ, ಒಳಿತುಗಳ ಬಗ್ಗೆ ಅತೀವ ತುಡಿತ. ಅಂತಾರಾಷ್ಟ್ರೀಯ ವ್ಯಾಪಾರದ ವಿಷಯದಲ್ಲಿ ಡಿಗ್ರಿ ಪಡೆಯುವ ಹೊತ್ತಿಗೆ, ಅದಾಗಲೇ ತನ್ನ ಸಮಾಜಮುಖಿ, ಪರಿಸರಸ್ನೇಹಿ ಕೆಲಸಗಳಿಂದ ಖ್ಯಾತಳಾಗಿದ್ದಳು. 2002ರಲ್ಲಿ, ಅಂದರೆ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಹವಾಯಿಯ ಶಾಸಕಾಂಗಕ್ಕೆ ಮೊದಲ ಬಾರಿ ಆಯ್ಕೆಯಾದಳು. ಹೀಗೆ ಆಯ್ಕೆಯಾದ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಗೂ ಪಾತ್ರಳಾದಳು. ಸಮಾಜ ಸೇವೆಯ ಗೀಳು ಹೇಗೂ ಇದ್ದೇ ಇತ್ತಲ್ಲ, 2001ರಲ್ಲಿ ಓಸಾಮಾ ಮಾಡಿದ ದಾಳಿಯೂ ಮನಸ್ಸಿನಲ್ಲಿ ಹಸಿರಾಗಿತ್ತು. ಸೀದಾ ಹೋಗಿ ಸೇನೆಯನ್ನು ಸೇರಿಕೊಂಡುಬಿಟ್ಟಳು. ನೀವೇ ಹೇಳಿ, ರಾಜಕೀಯದ ರುಚಿ ಕಂಡ ಎಷ್ಟು ಜನ ಸೇನೆಯನ್ನು ಸೇರುತ್ತಾರೆ? ಹೋಗಲಿ, ನಾಮಕಾವಸ್ಥೆಗೆ ತರಬೇತಿ ಪಡೆದಂತೆ ಮಾಡಿ ಸುಮ್ಮನಾದಳಾ? ಇಲ್ಲ. 2004ರಲ್ಲಿ ಇರಾಕ್‍ನ ಯುದ್ಧ ಭೂಮಿಗೇ ಹೋಗಿ ನಿಂತಳು. ಸತತ ಹನ್ನೆರಡು ತಿಂಗಳುಗಳ ಕಾಲ ಅಲ್ಲಿದ್ದು ತನ್ನ ತುಕಡಿಯೊಂದಿಗೆ ಹಿಂದಿರುಗಿದಳು. ಅಲ್ಲಿಂದ ಹಿಂದಿರುಗುತ್ತಿದ್ದಂತೆಯೇ ಸೇನಾಧಿಕಾರಿಗಳಿಗೆ ಸೀಮಿತವಾಗಿದ್ದ ಉನ್ನತ ತರಬೇತಿ ಪಡೆದು, ತನ್ನ ಕೇಂದ್ರಕ್ಕೇ ಮೊದಲಿಗಳಾದಳು. 2008ರಲ್ಲಿ ಅವಳು ಮತ್ತೆ ನುಗ್ಗಿದ್ದು ಕುವೈತ್‍ನ ಯುದ್ಧ ಭೂಮಿಗೆ. ಅವಳ ಸಾಹಸ, ಶೌರ್ಯ, ಸಮಯಪ್ರಜ್ಞೆಗಳನ್ನು ಕಂಡು ಕುವೈತ್‍ನ ಸೇನಾಧಿಕಾರಿಗಳು ಎಷ್ಟು ಪ್ರಭಾವಿತರಾದರು ಗೊತ್ತೇ? ಹೆಣ್ಣುಮಗಳೆಂಬ ಕಾರಣಕ್ಕೆ ಕೈಕುಲುಕಲು ಹಿಂಜರಿಯುತ್ತಿದ್ದ ಮಂದಿ ಅವಳಿಗೊಂದು ಪ್ರಶಸ್ತಿಯನ್ನೇ ನೀಡಿ ಸನ್ಮಾನಿಸಿದರು. ಮಹಿಳೆಯೊಬ್ಬಳ ಶೌರ್ಯಕ್ಕೆ ಪ್ರಶಸ್ತಿ ಕೊಡಮಾಡಿದ್ದು ಕುವೈತ್‍ನ ಇತಿಹಾಸದಲ್ಲೇ ಇದು ಮೊದಲ ಬಾರಿ!

ನಂತರ 2010ರಲ್ಲಿ ಹೊನೊಲುಲು ನಗರ ಸಭೆಗೆ ಆಯ್ಕೆಯಾಗಿ ಅಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಳು. 2012ರಲ್ಲಿ ಅಮೆರಿಕದ ಕೆಳಮನೆ, ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಗಾಗಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಚುನಾವಣೆಗೆ ನಿಂತಳು. ಅಲ್ಲಿ ಗೆದ್ದಿದ್ದೂ ದಾಖಲೆ ಅಂತರದಿಂದಲೇ! ಅಲ್ಲಿಗೆ 31ರ ಹರೆಯದ ತುಳಸಿ ಹೊಸ ಇತಿಹಾಸವನ್ನು ಬರೆದಿದ್ದಳು. ಅಮೆರಿಕದ ಕಾಂಗ್ರೆಸ್ ಸೇರಿದ ಮೊತ್ತ ಮೊದಲ ಹಿಂದೂ ಮಹಿಳೆಯಾಗಿದ್ದಳು! ಜೊತೆಗೆ, ಇತಿಹಾಸದಲ್ಲೇ ಪ್ರಪ್ರಥಮವಾಗಿ ಆಯ್ಕೆಯಾದ ಸೇನಾ ಹಿನ್ನೆಲೆಯುಳ್ಳ ಇಬ್ಬರು ಮಹಿಳೆಯರ ಪೈಕಿ ಓರ್ವಳೆಂಬ ಗರಿ. ಈಕೆಯ ದಾಖಲೆಗಳು ಇಲ್ಲಿಗೇ ಮುಗಿಯುವುದಿಲ್ಲ. ಭಗವದ್ಗೀತೆಯನ್ನು ಸಾಕ್ಷಿಯಾಗಿಟ್ಟುಕೊಂಡೇ ಪ್ರಮಾಣ ವಚನ ಸ್ವೀಕಾರ ಮಾಡಿ, ಅಮೆರಿಕದ ಸಂಸತ್ತಿನಲ್ಲಿ ಹೀಗೆ ಮಾಡಿದ ಮೊತ್ತಮೊದಲನೆಯವಳೆಂಬ ಹೆಗ್ಗಳಿಕೆಗೂ ಪಾತ್ರಳಾದಳು!

ಇಲ್ಲಿ ಮತ್ತೊಂದು ಮುಖ್ಯ ವಿಷಯವನ್ನು ಹೇಳಲೇಬೇಕು. ಅಮೆರಿಕದ ಸಂಸತ್ತಿನಲ್ಲಿ ಹಿಂದೂಗಳಿಗೆ ಕೆಂಪು ಹಾಸಿನ ಸ್ವಾಗತ ಸಿಗುವುದಿಲ್ಲ. ಅಲ್ಲಿ ಆದ್ಯತೆ ಏನಿದ್ದರೂ ಕ್ರೈಸ್ತರಿಗೆ. ಭಾರತೀಯ ಸಂಜಾತರಾದ ಬಾಬ್ಬಿ ಜಿಂದಾಲ್ ಮತ್ತು ನಿಕ್ಕಿ ಹ್ಯಾಲೆ ಸಹ ತುಳಸಿಯ ಹಾಗೇ ಸಂಸತ್ತಿಗೆ ಆಯ್ಕೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಹಿಂದೂವಾಗಿದ್ದ ಬಾಬ್ಬಿ ಹಾಗೂ ಸಿಖ್ಖಳಾಗಿದ್ದ ನಿಕ್ಕಿ ಇಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರು ಎಂಬುದು ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ಬಾಬ್ಬಿಯಂತೂ ತನ್ನ ಭಾರತೀಯ ಮೂಲವನ್ನು, ಧರ್ಮದ ಬೇರನ್ನು ಯಾರಾದರೂ ಕೆದಕಿದರೆ ಸಾಕು, ಕಸಿವಿಸಿಗೊಳ್ಳುವ ಮನುಷ್ಯ. ಆದರೆ ತುಳಸಿ ಅದಕ್ಕೆ ಸಂಪೂರ್ಣ ವ್ಯತಿರಿಕ್ತಳು. ‘ನಾನು ಸೇನೆಯನ್ನು ಸೇರುವಾಗ, ಯಾವ ಧರ್ಮದವಳು ಎಂದು ಯಾರೂ ಕೇಳಲಿಲ್ಲವಲ್ಲ, ಈಗ ಅದೇಕೆ ಅಳತೆಗೋಲಾಗಬೇಕು? ಎಂದು ನೇರವಾಗಿಯೇ ಕೇಳಿದವಳು. ಆದ್ದರಿಂದಲೇ ಇಂದು ಅಮೆರಿಕದಲ್ಲಿರುವ ಹಿಂದೂಗಳಿಗೆ ಬಾಬ್ಬಿ ಹಾಗೂ ನಿಕ್ಕಿಗಿಂತ ತುಳಸಿಯೇ ಆಪ್ತಳಾಗಿರುವುದು!

ತುಳಸಿಯದ್ದು ನೇರ, ದಿಟ್ಟ ಮಾತು. ಮೋದಿಯವರಿಗೆ ವೀಸಾ ನಿರಾಕರಿಸಿ ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಖಂಡಿಸಿದ್ದಳು ಈಕೆ. ಸಂಸತ್ತಿಗೆ ಹೋದ ಮೇಲೂ ಅಷ್ಟೇ, ಅಮೆರಿಕ ತನ್ನ ಯೋಧರನ್ನು ಕಂಡ ಕಂಡ ದೇಶಗಳಿಗೆ ಯುದ್ಧದ ಸಲುವಾಗಿ ಅಟ್ಟುವುದನ್ನು ಕಟುವಾಗಿ ವಿರೋಧಿಸಿದ್ದಳು. ಮುಸ್ಲಿಂ ಉಗ್ರರು ಹಾಗೂ ಅವರು ಹುಟ್ಟುಹಾಕುತ್ತಿರುವ ಅಶಾಂತಿಗೂ ಈಕೆಯ ವಿರೋಧವಿದೆ. ಕಳೆದ ಸೆಪ್ಟೆಂಬರ್‍ನಲ್ಲಿ ಮೋದಿಯವರು ಮ್ಯಾಡಿಸನ್ ಚೌಕಕ್ಕೆ ಬಂದಿದ್ದರಲ್ಲ, ಆಗ ತುಳಸಿಯನ್ನು ಭೇಟಿಯಾಗಿದ್ದರು. ಭಾರತಕ್ಕೆ ಬರುವಂತೆ ಅಕ್ಕರೆಯ ಆಮಂತ್ರಣವನ್ನೂ ನೀಡಿದ್ದರು. ಆಗ ನಡೆದಿದ್ದ ಮಜಾ ನೋಡಿ, ಸೆಕ್ಯುಲರ್ ಪತ್ರಕರ್ತೆಯರ ಪಟಾಲಂನಲ್ಲಿ ಅಗ್ರ ಸ್ಥಾನದಲ್ಲಿರುವ ಬರ್ಖಾ ದತ್ ತುಳಸಿಯ ಸಂದರ್ಶನಕ್ಕೆಂದು ಓಡೋಡಿ ಹೋಗಿ, ವಿಚಿತ್ರವಾದ ವ್ಯಂಗ್ಯ ಬೆರೆಸಿ ‘ಇಡೀ ಸಂಸತ್ತಿನಲ್ಲಿ ನೀವೊಬ್ಬರೇ ಹಿಂದೂ. ಏನನಿಸುತ್ತದೆ ನಿಮಗೆ’ ಎಂದು ಕೇಳಿದಾಗ ತುಳಸಿ ಕೊಟ್ಟ ಅಭಿಮಾನದ ಉತ್ತರ ಬರ್ಖಾಳ ಉತ್ಸಾಹವನ್ನು ಜರ್ರನೆ ಇಳಿಸಿತ್ತು!

‘ನನ್ನ ಬದುಕಿನ ಸ್ಫೂರ್ತಿ ಹಾಗೂ ಜೀವಾಳವೇ ಭಗವದ್ಗೀತೆ’ ಎಂದು ಅಳುಕಿಲ್ಲದೆ ಹೇಳುತ್ತಾಳೆ ತುಳಸಿ. ಧೈರ್ಯ, ಶಾಂತಿ, ನೆಮ್ಮದಿ, ತಾಳ್ಮೆ ಹಾಗೂ ಸಮಾಜ ಸೇವೆಯ ಗುಣಗಳನ್ನು ಬೆಳೆಸಿದ್ದೇ ಗೀತೆ ಎನ್ನಲು ಈಕೆಗೆ ಸಂಕೋಚವೇನಿಲ್ಲ. ಭಕ್ತಿ ಹಾಗೂ ಕರ್ಮ ಯೋಗಗಳು ಮೆಚ್ಚಿನವೇ ಆದರೂ ಸಾಂಖ್ಯಯೋಗದ 23ನೆಯ ಶ್ಲೋಕ ಅತ್ಯಂತ ಪ್ರೀತಿಯದ್ದಂತೆ. ಅದು ಹೀಗಿದೆ:

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ

ಆತ್ಮನನ್ನು ಶಸ್ತ್ರಗಳು ತುಂಡರಿಸಲಾರವು, ಬೆಂಕಿಯು ಸುಡಲಾರದು, ನೀರು ನೆನೆಸಲಾರದು ಹಾಗೂ ಗಾಳಿಯು ಒಣಗಿಸಲಾರದು ಎಂಬುದು ಇದರ ತಾತ್ಪರ್ಯ. ಇದನ್ನು ಅರ್ಥ ಮಾಡಿಕೊಳ್ಳುವ ಪ್ರೌಢಿಮೆ, ಜಪ ಧ್ಯಾನಗಳನ್ನು ತಪ್ಪದೇ ಮಾಡುವ ಅಪ್ಪಟ ಸಸ್ಯಾಹಾರಿ ತುಳಸಿಗಿದೆ. ‘ಬದಲಾಯಿಸುವ ಶಕ್ತಿ’ ಇದೆಯೆಂದು ಹೇಳಿಕೊಳ್ಳುವವರು ಆಡುವ ಅತಿರೇಕ ಈಕೆಯದ್ದಲ್ಲ. ‘ವಿಷ್ಣು ನನ್ನೊಡನೆ ಮಾತನಾಡುತ್ತಾನೆ, ಇದ್ದಕ್ಕಿದ್ದಂತೆ ಪವಾಡವೊಂದು ನಡೆದು ನನ್ನ ಕಷ್ಟಗಳೆಲ್ಲಾ ಪರಿಹಾರವಾದವು’ ಎಂಬಂಥ ತಿಕ್ಕಲುತನಗಳು ಈಕೆಯ ವ್ಯಕ್ತಿತ್ವದ ಹಾಸಿನ ಯಾವ ಅಂಚಿನಲ್ಲೂ ಗೋಚರಿಸುವುದಿಲ್ಲ. ಈಗ ವ್ಯಕ್ತಿತ್ವ ವಿಕಸನದ ಪಾಠಗಳಲ್ಲಿ ಹೇಗೆ ಗೀತೆಯನ್ನು ಅಳವಡಿಸುತ್ತಿದ್ದಾರೋ ಹಾಗೇ ತುಳಸಿಯೂ ತನ್ನ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿರುವುದು. ಅದರ ಫಲವೇ ಈ ಯಶಸ್ಸು ಹಾಗೂ ಸಾರ್ಥಕ್ಯ. ಅಂದ ಹಾಗೇ ಮೊನ್ನೆ ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಎರಡನೆಯ ಅವಧಿಗೆ ಮತ್ತೆ ಆಯ್ಕೆಯಾಗಿದ್ದಾಳೆ.

ಮೋದಿಯವರ ಆಹ್ವಾನಕ್ಕೆ ಮನ್ನಣೆಯಿತ್ತು, ಮೊತ್ತ ಮೊದಲ ಬಾರಿ ತನ್ನ ಪ್ರೀತಿಯ ಧರ್ಮದ ಹುಟ್ಟೂರನ್ನು ನೋಡಲು ಕಾತರಿಸಿ ಬಂದಿದ್ದಾಳೆ ಈ ಹೆಣ್ಣುಮಗಳು. ಮಂಥನ ಹಾಗೂ ಮಿಥಿಕ್ ಸೊಸೈಟಿ ಜಂಟಿಯಾಗಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲೋಸುಗ ನಾಳೆ ಬೆಂಗಳೂರಿಗೂ ಬರುತ್ತಿದ್ದಾಳೆ. ಸಂವಾದವಿರುವುದು ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ. ಎಲ್ಲರಿಗೂ ಮುಕ್ತ ಆಹ್ವಾನವಿದೆ. ಪ್ರಶ್ನೆಗಳನ್ನು ಬಾಣದಂತೆ ಹೂಡುವ ಅವಕಾಶವೂ. ಒಟ್ಟಿನಲ್ಲಿ, ಹಿಂದೂ ಮನಸ್ಸುಗಳಿಗೆ ಕವಿದಿರುವ ಮಂಕನ್ನು ನೋಡಿ ಈಕೆಗೆ ಭ್ರಮನಿರಸನವಾಗದಿದ್ದರೆ ಸರಿ!

ಈಕೆಯ ಮಾತುಗಳಾದರೂ ಶಂಖದಿಂದ ಬೀಳುವ ತೀರ್ಥವಾದೀತಾ?