ಮೈಸೂರು,ಜೂ.14: ಈ ದೇಶದ ತಥಾಕತಿತ ದಲಿತನಿಗೆ ಸಮಾಜದೊಳಗೆ ಒಂದಾಗಿ ಬದುಕುವ ಯಾವ ಸಮಾಜದ ಕನಸನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಂಡಿದ್ದರೋ, ಅಂತಹ ಸಮಾಜ ಕೇವಲ ಆರೆಸ್ಸೆಸ್ ನಿಂದ ಸಾಧ್ಯ ಎಂಬುದು ನನ್ನ ನಂಬಿಕೆ ಎಂದು ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ನಗರದ ಮಾಧವಕೃಪಾದಲ್ಲಿ ಸಾಮರಸ್ಯ ವೇದಿಕೆ ಆಯೋಜಿಸಿದ್ದ ಸ್ನೇಹಮಿಲನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾವಪೂರ್ಣವಾಗಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಚಿಕ್ಕಂದಿನಿಂದಲೂ ಸಂಘದ ವಿಜಯ ಶಾಖೆ ಸ್ವಯಂಸೇವಕನಾಗಿ ಬೆಳೆದಿದ್ದರಿಂದ, ಸಂಸ್ಕಾರಯುತ ಗುಣಗಳು ನನ್ನಲ್ಲೂ ಬೆಳೆಯಿತು. ಮೈಸೂರಿನಲ್ಲಿ ಮೊದಲನೆಯ ಸಂಘಶಿಕ್ಷಾವರ್ಗ ಹಾಗೂ ಧಾರವಾಡದಲ್ಲಿ ಹರಿಬಾವೂ ವಝೆಯವರ ಒತ್ತಾಯದಿಂದ ಎರಡನೇ ವರ್ಷದ ಸಂಘ ಶಿಕ್ಷಾವರ್ಗ ಮುಗಿಸಿದೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಕೆಲಸಮಯ ವಿದ್ಯಾರ್ಥಿ ಪರಿಷತ್ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೆ. ಪರಮಪೂಜನೀಯ ಡಾಕ್ಟರ್ ಜೀ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ತೃತೀಯ ಸರಸಂಘಚಾಲಕರಾಗಿದ್ದ ಪೂಜನೀಯ ಬಾಳಾಸಾಹೇಬ್ ದೇವರಸ್ ಅವರೊಂದಿಗೆ ವೇದಿಕೆಯಲ್ಲಿ ಕೂಡುವ ಭಾಗ್ಯ ನನ್ನದಾಗಿತ್ತು. ರಾಜಕೀಯದಂತಹ ಕ್ಷೇತ್ರದಲ್ಲಿದ್ದರೂ ಬಾಲ್ಯದಿಂದಲೂ ಸಂಘದ ಸಕ್ರಿಯ ಸ್ವಯಂಸೇವಕನಾಗಿದ್ದ ಪ್ರಭಾವ ಮಾತ್ರದಿಂದ ಪ್ರಾಮಾಣಿಕತೆ ಮತ್ತು ನೈತಿಕತೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ, ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕರಾದ ಮ. ವೆಂಕಟರಾಂ, ಸಾಮರಸ್ಯ ವೇದಿಕೆಯ ರಾಜ್ಯಸಂಚಾಲಕರಾದ ವಾದಿರಾಜರು ಹಾಗೂ ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ವಿ ಶ್ರೀನಿವಾಸ ಪ್ರಸಾದರ ಅನುಯಾಯಿಗಳು ಮತ್ತು ಉಪೇಕ್ಷಿತ ಬಂಧುಗಳು ಪಾಲ್ಗೊಂಡರು.

ಕಾರ್ಯಕ್ರಮದ ಮೊದಲು ಸಂಘದ ಪರಿಚಯದ ವಿಡಿಯೋ ಪ್ರದರ್ಶನವಿತ್ತು. ನಂತರ ಶ್ರೀ ವಾದಿರಾಜರು ಪ್ರಾಸ್ತಾವಿಕವಾಗಿ ಸಂಘದ ಬಗ್ಗೆ ಡಾ. ಅಂಬೇಡ್ಕರ್ ಅವರಿಗೆ ಇದ್ದ ಅಭಿಪ್ರಾಯ ಹಾಗು ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಸಂಘ ಮತ್ತು ಸಂಘ ಪರಿವಾರ ಮಾಡಿರುವ ಸಾಧನೆ ಮತ್ತು ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿದರು. ಹಾಗೂ ಇತರರು ಉಪಸ್ಥಿತರಿದ್ದರು.

 

ಸಂಘಕ್ಕೆ ಸಾಮರಸ್ಯ ಎನ್ನುವುದು ರಣತಂತ್ರವಲ್ಲ ಬದಲಾಗಿ ಅದೊಂದು ಬದ್ಧತೆ : ಸು. ರಾಮಣ್ಣ
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಾಮರಸ್ಯ ಎನ್ನುವುದು ರಣತಂತ್ರವಲ್ಲ ಬದಲಾಗಿ ಅದೊಂದು ಬದ್ಧತೆ ಎಂದು ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ಸು. ರಾಮಣ್ಣನವರು, ಆಯೋಜಿಸಿದ್ದ ಉಪೇಕ್ಷಿತ ಸಮಾಜದ ಗಣ್ಯರೊಡನೆ ಸ್ನೇಹ ಮಿಲನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು
ಸಂಘ ಹಿಂದೂ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಂಡಾಗ ಎರಡು ಅಂಶಗಳನ್ನು ಅದು ನಿರ್ಧರಿಸಿತ್ತು. ಅವೆಂದರೆ ಈ ದೇಶದ ಸಮಸ್ತ ಹಿಂದೂಗಳನ್ನು ಸಂಘಟಿಸುವುದು ಮತ್ತು ದೇಶದಲ್ಲಿ ತುಂಬಿರುವ ಜಾತಿ, ಮೇಲು ಕೀಳು, ಸ್ಪೃಷ್ಯಾ ಅಸ್ಪೃಸ್ಯ ಭಾವನೆಗಳೇ ಮುಂತಾದ ಹಿಂದೂಗಳ ಮನಗಳಲ್ಲಿದ್ದ ಕೊಳಕನ್ನು ತೊಡೆದು ಹಾಕುವುದೇ ಆಗಿತ್ತು. ಸಂಘ ಯಾವತ್ತೂ ಯಾರನ್ನೂ ಯಾವ ಜಾತಿ ಎಂದು ಕೇಳುವುದಿಲ್ಲ. ಸಂಘದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ ಯಾವುದೇ ಭಿನ್ನತೆ ತಾರತಮ್ಯವಿಲ್ಲ. ಇಲ್ಲಿ ತುಷ್ಟೀಕರಣ ಇಲ್ಲ. ಬದಲಾಗಿ ಸಮಾಜದಲ್ಲಿ ಒಟ್ಟಾಗಿ ಬದುಕಲು ಬೇಕಾದ, ಒಬ್ಬರಿಗೊಬ್ಬರು ನೆರವಾಗಬಲ್ಲ ಪೂರಕ ಸಬಲೀಕರಣ ವ್ಯವಸ್ಥೆ ಇಲ್ಲಿದೆ ಎಂದರು. ಮುಂದುವರೆದ ಅವರು ಮಾನವ ದೇಹದ ಹಲ್ಲು ಮತ್ತು ನಾಲಗೆ ನಡುವಣ ಇರಬಹುದಾದ ಸಾಮರಸ್ಯವೇ ಇಂದು ಸಮಾಜದ ಎಲ್ಲಾ ವಿಭಾಗಗಳಲ್ಲೂ ಉಂಟಾಗಬೇಕು. ಸಂಘ ಪ್ರಾಮಾಣಿಕವಾಗಿ ಈ ದೇಶದಲ್ಲಿ ಜಾತಿಗಳ ನಡುವಣ ತಾರತಮ್ಯವನ್ನು ಹೋಗಲಾಡಿಸಲು ಕೇವಲ ಭಾಷಣಗಳಲ್ಲಿ ಮಾತ್ರವಲ್ಲ ದಿನನಿತ್ಯದ ವ್ಯವಹಾರಗಳಲ್ಲೂ ಸಾಮರಸ್ಯದ ಅಂಶಗಳನ್ನು ಅಳವಡಿಸಿಕೊಂಡಿದೆ. ಸಂಘದ ಪ್ರಚಾರಕರುಗಳಿಗೆ ದಲಿತರ ಮನೆಯಲ್ಲಿ ಸಹ ಪಂಕ್ತಿ ಭೋಜನ ಇದೊಂದು ದಿನನಿತ್ಯದ ಅಭ್ಯಾಸವಾಗಿದ್ದು ಇದೊಂದು ಮಹತ್ವದ ಸುದ್ದಿಯೇ ಅಲ್ಲ. ಇನ್ನೊಬ್ಬರಿಗಾಗಿ ಬದುಕುವುದನ್ನೇ ಜೀವನದ ಗುರಿಯಾಗಿರಿಸಿಕೊಂಡಿರುವ ಸಾವಿರಾರು ತರುಣರು ಪ್ರಮಾಣಿಕತೆಯಿಂದ ಮತ್ತು ಪಾರದರ್ಶಕವಾಗಿ ಸಮಾಜದ ಉಪೇಕ್ಷಿತ ಬಂಧುಗಳ ಜೊತೆ ಸಮ್ಮಿಲಿತವಾಗಿದ್ದರೂ ಇನ್ನೂ ಈ ದಲಿತ ಸಮಾಜ ಕೆಲವರು ಇನ್ನೂ ಸಂಘವನ್ನು ನಂಬುತ್ತಿಲ್ಲಾ ಎನ್ನುವುದೇ ನೋವಿನ ಸಂಗತಿ. ಸಂಘವನ್ನು ಅರ್ಥಮಾಡಿಕೊಳ್ಳಲು ಸಂಘಕ್ಕೆ ಬನ್ನಿ ದೂರದಿಂದಷ್ಟೇ ನೋಡಿ ಸಂದೇಹ ಪಡಬೇಡಿ ಎಂದು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.